ಕೋಮು ಸೌಹಾರ್ದತೆಗೆ ರಾಜ್ಯಾದ್ಯಂತ ಸಮಾವೇಶ: ನಿಸಾರ್‌ ಅಹ್ಮದ್‌

| Published : Jan 19 2025, 02:15 AM IST

ಕೋಮು ಸೌಹಾರ್ದತೆಗೆ ರಾಜ್ಯಾದ್ಯಂತ ಸಮಾವೇಶ: ನಿಸಾರ್‌ ಅಹ್ಮದ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪೊಲೀಸ್‌ ಅಧಿಕಾರಿ ಜಿ.ಎ.ಬಾವಾ ಮಾತನಾಡಿ, ಹೊರಗಿನವರು ತಿಳಿದುಕೊಂಡಂತೆ ಕರಾವಳಿಯಲ್ಲಿ ಅಶಾಂತಿಯ ವಾತಾವರಣ ಇಲ್ಲ, ರಾಜಕೀಯ ಸ್ವಾರ್ಥದಿಂದ ಕೆಲವೊಮ್ಮೆ ಶಾಂತಿ ಕದಡುತ್ತದೆ. ಅಲ್ಪಸಂಖ್ಯಾತರಿಗೆ ವ್ಯಾಪಾರ ನಡೆಸಲು ಆರ್ಥಿಕ ನೆರವು ನೀಡುವಂತಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಮಾಜದಲ್ಲಿ ಕೋಮು ಸೌಹಾರ್ದತೆಗಾಗಿ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ನಿಸಾರ್‌ ಅಹ್ಮದ್‌ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಮುಂಬರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರ ಕೈಗೊಳ್ಳಬಹುದಾದ ಸವಲತ್ತುಗಳ ಕುರಿತು ಅವಿಭಜಿತ ದ.ಕ. ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರೊಂದಿಗೆ ಸಭೆ ನಡೆಸಿದರು.ಕೋಮು ಸಾಮರಸ್ಯ ಅತ್ಯವಶ್ಯಕವಾಗಿದೆ. ಅದಕ್ಕಾಗಿ ಎಲ್ಲ ಸಮುದಾಯದ ಮುಖಂಡರನ್ನು ಕರೆಸಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ಕ್ರಿಯಾಯೋಜನೆಯಲ್ಲಿ ಗ್ರಾಮ ಮಟ್ಟದಿಂದ ತೊಡಗಿ ರಾಜ್ಯ ಮಟ್ಟದ ವರೆಗೆ ಪ್ರತ್ಯೇಕ ಕಾರ್ಯಕ್ರಮ ನಡೆಸುವ ಅಗತ್ಯತೆ ಇದೆ. ಎಲ್ಲ ಸಮುದಾಯದ ಜನರೂ ಮುಖ್ಯವಾಹಿನಿಯಲ್ಲಿ ಸೇರಬೇಕು ಎಂಬುದು ಸರ್ಕಾರದ ಅಪೇಕ್ಷೆ ಹಾಗೂ ಆಯೋಗದ ಉದ್ದೇಶವೂ ಆಗಿದೆ ಎಂದರು.

ಮಾಜಿ ಪೊಲೀಸ್‌ ಅಧಿಕಾರಿ ಜಿ.ಎ.ಬಾವಾ ಮಾತನಾಡಿ, ಹೊರಗಿನವರು ತಿಳಿದುಕೊಂಡಂತೆ ಕರಾವಳಿಯಲ್ಲಿ ಅಶಾಂತಿಯ ವಾತಾವರಣ ಇಲ್ಲ, ರಾಜಕೀಯ ಸ್ವಾರ್ಥದಿಂದ ಕೆಲವೊಮ್ಮೆ ಶಾಂತಿ ಕದಡುತ್ತದೆ. ಅಲ್ಪಸಂಖ್ಯಾತರಿಗೆ ವ್ಯಾಪಾರ ನಡೆಸಲು ಆರ್ಥಿಕ ನೆರವು ನೀಡುವಂತಾಗಬೇಕು ಎಂದರು.

ಉದ್ಯೋಗಕ್ಕಾಗಿ ಉಚಿತ ತರಬೇತಿ ಸೌಲಭ್ಯ: ಕೇಂದ್ರ ಸರ್ಕಾರದ ಯೋಜನೆಯಡಿ ಸೀ ಡಾಕ್‌ ಕಂಪನಿಯಿಂದ 200 ಮಂದಿ ಅಲ್ಪಸಂಖ್ಯಾತ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಮಾತುಕತೆ ನಡೆಸಲಾಗಿದೆ. ಇದರಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉದ್ಯೋಗ ಸೇರ್ಪಡೆಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು. ಆಯೋಗದ ವಿಶೇಷ ಅಧಿಕಾರಿ ಜಫಾರಿ ಇದ್ದರು. ಬಿಜೆಪಿ ಜನಪ್ರತಿನಿಧಿಗಳು ಇರುವಲ್ಲಿ ಅಲ್ಪಸಂಖ್ಯಾತರು ಸವಲತ್ತು ವಂಚಿತ

ಅಲ್ಪಸಂಖ್ಯಾತರಿಗೆ ಎಲ್ಲ ಇಲಾಖೆಗಳಲ್ಲೂ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಆದರೆ ಸಮಪರ್ಕವಾಗಿ ಅನುಷ್ಠಾನವಾಗುತ್ತಿಲ್ಲ. ಬಿಜೆಪಿ ಸಂಸದರು, ಶಾಸಕರು ಇರುವಲ್ಲಿ ಅಲ್ಪಸಂಖ್ಯಾತರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಉಪಾಧ್ಯಕ್ಷ ಮೊಯ್ದಿನಬ್ಬ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಕಳೆದ 10 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸರಿಯಾಗಿ ಸವಲತ್ತುಗಳು ಸಿಗುತ್ತಿಲ್ಲ. ಅಲ್ಪಸಂಖ್ಯಾತರ ಅನುದಾನವನ್ನು ಬಂಟ ಹಾಗೂ ಬಿಲ್ಲವ ಸಮುದಾಯ ಹೆಚ್ಚಾಗಿ ಇರುವ ರಸ್ತೆಗಳಿಗೆ ವರ್ಗಾಯಿಸಲಾಗುತ್ತಿದೆ. ಮಾಹಿತಿ ಹಕ್ಕಿನಲ್ಲಿ ಕೇಳಿದರೂ ಉತ್ತರ ಸಿಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡರು.