ಸಾರಾಂಶ
ಬೆಂಗಳೂರು : ರಾಜ್ಯಾದ್ಯಂತ ಡೆಂಘಿ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗುತ್ತಿವೆ. ಕೆಲ ಸಾವುಗಳೂ ವರದಿಯಾಗಿವೆ. ಈ ಕಾಯಿಲೆಗಳನ್ನು ನಿಯಂತ್ರಿಸಲು ವೈದ್ಯರ ಜತೆಗೆ ಸಾರ್ವಜನಿಕರು ಸಹ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಆರೋಗ್ಯ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘಿ ಸೇರಿದಂತೆ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗುತ್ತಿವೆ. ಇವು ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದ್ದು, ಸ್ವಚ್ಛ ನೀರಿನಲ್ಲೇ ಇವು ಉತ್ಪತ್ತಿಯಾಗುತ್ತವೆ. ಇವುಗಳನ್ನು ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಸಾರ್ವಜನಿಕರು ಸಹ ಜವಾಬ್ದಾರಿ ಅರಿತು ಸಾಥ್ ನೀಡಬೇಕು ಎಂದು ಹೇಳಿದರು.
ನಾವು ಡೆಂಘಿ ಮತ್ತಿತರ ಕಾಯಿಲೆಗಳು ಸೊಳ್ಳೆಗಳಿಂದ ಬರುತ್ತವೆ ಎಂದು ಗೊತ್ತಿದ್ದರೂ ಅವುಗಳನ್ನು ನಿಯಂತ್ರಿಸುವುದಿಲ್ಲ. ಕೆಲವು ಚಟಗಳಿಂದ ಕಾಯಿಲೆಗಳು ಬರುತ್ತವೆ ಎಂದು ಗೊತ್ತಿದ್ದರೂ ಮುಂದುವರೆಸುತ್ತೇವೆ. ಉದಾ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ಅದರಿಂದ ಕ್ಯಾನ್ಸರ್ ಬರುತ್ತದೆ ಎಂದು ಓದಿಕೊಂಡೇ ಸೇದುತ್ತೇವೆ. ಅವುಗಳ ಅಪಾಯ ಅರಿತು ಎಲ್ಲರೂ ದುಶ್ಚಟಗಳಿಂದ ದೂರ ಉಳಿಯಬೇಕು ಎಂದರು.
24 ವರ್ಷದ ಹಿಂದೆಯೇ ಆ್ಯಂಜಿಯೋಪ್ಲಾಸ್ಟಿ ಆಗಿದೆ:
ನಾನು ಸಹ ಸಿಗರೇಟ್ ಸೇದುತ್ತಿದ್ದೆ. ಅದರಿಂದ ಎದೆಯುರಿ ಸಮಸ್ಯೆ ಕಾಣಿಸಿಕೊಂಡು ಆಯುಷ್ಯ ಕಡಿಮೆ ಆಗುತ್ತದೆ ಎಂದು ತಿಳಿದಾಗ 1987ರಲ್ಲಿ ಸಿಗರೇಟು ಬಿಟ್ಟೆ. ಆದರೆ ಅದರ ಪರಿಣಾಮ ಹಾಗೆಯೇ ಇತ್ತು. 2000ನೇ ಇಸವಿಯಲ್ಲಿ ಹೃದಯಕ್ಕೆ ಆ್ಯಂಜಿಯೋ ಪ್ಲಾಸ್ಟಿ ಮಾಡಿಸಿಕೊಳ್ಳುವಂತಾಯಿತು. ಹೀಗಾಗಿ ನಮ್ಮ ಆಹಾರ ಪದ್ಧತಿ, ಜೀವನಶೈಲಿ ಬಹಳ ಮುಖ್ಯ ಎಂದು ಹೇಳಿದರು.ಬಡವರಿಗೆ ಹಸನ್ಮುಖಿಯಾಗಿ ಚಿಕಿತ್ಸೆ ನೀಡಿ:
ವೈದ್ಯೋ ನಾರಾಯಣೋ ಹರಿಃ ಎಂದು ಭಾವಿಸಲಾಗುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವವರು ಹಾಗೂ ಆರೋಗ್ಯ ರಕ್ಷಣೆ ಮಾಡುವವರು ವೈದ್ಯರು. ಕೊರೋನಾ ಸಂದರ್ಭದಲ್ಲಿ ಅವರ ಸೇವೆ ಮರೆಯಲಾಗದು. ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡವರಿಗೆ ಹಸನ್ಮುಖಿಯಾಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ವೈದ್ಯರ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
2 ತಿಂಗಳಲ್ಲಿ ಔಷಧ ಕೊರತೆ ನೀಗಿಸುತ್ತೇವೆ:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಯೇ ಸರಬರಾಜು ಆಗುತ್ತಿರಲಿಲ್ಲ. ಶೇ.30ರಷ್ಟು ಮಾತ್ರ ಔಷಧ ನಿಗಮದಿಂದ ಪೂರೈಕೆಯಾಗುತ್ತಿತ್ತು. ಇದೀಗ ಸಾಕಷ್ಟು ಸುಧಾರಣೆ ತಂದಿದ್ದು, ಶೇ.80ರಷ್ಟು ಔಷಧಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದೆ. ಮುಂಬರುವ ಎರಡು ತಿಂಗಳೊಳಗೆ ಸಂಪೂರ್ಣವಾಗಿ ಔಷಧಿ ಸರಬರಾಜು ಸರಿಪಡಿಸುವುದಾಗಿ ಭರವಸೆ ನೀಡಿದರು.
ಕಳೆದ 30 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಪರಿಷ್ಕರಣೆ ಅಂತಿಮ ಹಂತದಲ್ಲಿದ್ದು, ಒಂದು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ವಿಶೇಷವಾಗಿ 8 ವರ್ಷಗಳ ಬಳಿಕ ಆರೋಗ್ಯ ಇಲಾಖೆ ವರ್ಗಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಕೌನ್ಸೆಲಿಂಗ್ ಮೂಲಕ ನಡೆಸಲಾಗುತ್ತಿದ್ದು, ಪಾರದರ್ಶಕ ಆಡಳಿತವನ್ನು ಇಲಾಖೆಯಲ್ಲಿ ತರಲಾಗಿದೆ ಎಂದರು. ಜೀವಮಾನ ಸಾಧನೆ ಹಾಗೂ ಇತರೆ ಪ್ರಶಸ್ತಿಗಳಿಗೆ ಭಾಜನರಾದ ವೈದ್ಯರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಸೇರಿ ಹಲವರು ಹಾಜರಿದ್ದರು.