ಸಾರಾಂಶ
ಶಿರಸಿ: ಮೊಗೇರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಕೆಯಾದ ಜೆ.ಸಿ. ಪ್ರಕಾಶ ಸಮಿತಿ ವರದಿ ಜಾರಿಯಿಂದ ನೈಜ ಪರಿಶಿಷ್ಟರಿಗೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಮೀಸಲಾತಿ ಒಕ್ಕೂಟದ ರಾಜ್ಯ ಸಂಚಾಲಕ ಸುಭಾಷ ಕಾನಡೆ ಎಚ್ಚರಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ವಿಚಾರ 2006ರಿಂದಲೂ ಚರ್ಚೆಯಲ್ಲಿದೆ. ಸುಪ್ರಿಂ ಕೋರ್ಟ್‌ನಲ್ಲೂ ಈ ಸಂಬಂಧ ವಿಚಾರಣೆ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐಎಎಸ್ ಅಧಿಕಾರಿ ಜೆ.ಸಿ. ಪ್ರಕಾಶ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಜೆ.ಸಿ. ಪ್ರಕಾಶ ಅವರು ಅಧ್ಯಯನ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದ್ದಾಗಿ ತಿಳಿದುಬಂದಿದೆ. ಈಗಾಗಲೇ ಮೊಗೇರ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ವರದಿ ಅಂಗೀಕರಿಸಿ ಕಾನೂನು ಮಾಡಿದ್ದ ರಾಜ್ಯ ಸರ್ಕಾರವು ಪ್ರಸ್ತುತ ಎರಡನೇ ಬಾರಿಗೆ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡಿರುವುದು ಸರಿಯಲ್ಲ.
ತರಾತುರಿಯಲ್ಲಿ ವರದಿ ಸಿದ್ಧಪಡಿಸಲಾಗಿದೆ. ವರದಿಯಲ್ಲಿ ನೈಜ ಪರಿಶಿಷ್ಟರಿಗೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.ಉತ್ತರ ಕನ್ನಡ ಜಿಲ್ಲೆಯ ಮೊಗೇರರ ಸಮುದಾಯದ ಬಗ್ಗೆ ಎಚ್.ಕೆ. ಭಟ್ ಎಂಬವರು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವಿಸ್ತ್ರತವಾದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯನ್ನು ಪರಿಶೀಲಿಸಿ ಕೋರ್ಟ್‌ಗಳು ತೀರ್ಪು ನೀಡಿವೆ. ಮೊಗೇರ ಸಮುದಾಯವರು ಮೀನುಗಾರರಾಗಿದ್ದು, ಹಿಂದುಳಿದ ಪ್ರವರ್ಗ 1ಕ್ಕೆ ಸೇರಿದವರು ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಗಣಿಸಿದೆ.
ಮೊಗೇರ ಸಮುದಾಯದ ಹಲವರು ಪಡೆದುಕೊಂಡಿದ್ದ ಎಸ್‌ಸಿ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿದೆ. ಸರ್ಕಾರಿ ಉದ್ಯೋಗದಿಂದ ವಜಾ ಮಾಡಿ, ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಹಲವು ಮೊಗೇರರು ಪ್ರವರ್ಗ 1 ಜಾತಿ ಪ್ರಮಾಣಪತ್ರವನ್ನೂ ಪಡೆದುಕೊಂಡಿದ್ದಾರೆ. ಹೀಗಿರುವಾಗ ಹೊಸ ವರದಿಯೊಂದನ್ನು ತಂದು ನಿಜ ಪರಿಶಿಷ್ಟರಿಗೆ ಅನ್ಯಾಯ ಮಾಡುವ ಯತ್ನ ನಡೆಯುತ್ತಿದೆ ಎಂದರು.ಪ್ರಮುಖರಾದ ರಘು ಕಾನಡೆ, ವಿಠ್ಠಲ ಪಾಠಣಕರ್, ಕಾಶಿನಾಥ ಕಾನಡೆ, ಅರವಿಂದ ನೇತ್ರೇಕರ್, ಮುನೀಶ್ ಕಾನಡೆ ಇತರರಿದ್ದರು.