ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಕಲ್ಯಾಣಿ ಹೇಳಿದರು.

ಚಿತ್ರದುರ್ಗ: ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ವಿರುದ್ಧ ಸಮರ ಹೂಡಲು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಕಲ್ಯಾಣಿ ಹೇಳಿದರು.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಅತ್ಯಂತ ವಿಕೃತ ರೂಪ ತಾಳಿಪರಾಕಾಷ್ಠೆ ತಲುಪಿವೆ. ಕರ್ನಾಟಕದಲ್ಲಿ ಸೌಜನ್ಯ, ದಾನಮ್ಮ, ನೇಹಾ ಹಿರೇಮಠ್, ಅಂಜಲಿ, ಮಹಾಲಕ್ಷ್ಮಿ, ಯಾಮಿನಿಯಂತವರ ಘೋರ ಸಾವುಗಳು ನಾಗರಿಕರನ್ನು ಆಘಾತಕ್ಕೀಡು ಮಾಡಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಐದು ವರ್ಷದ ಕಂದಮ್ಮ, ಮೈಸೂರು ದಸರಾದಲ್ಲಿ ಬಲೂನು ಮಾರಲು ಕುಟುಂಬದೊಂದಿಗೆ ಗುಳೆ ಬಂದ ಕಂದಮ್ಮನ ಮೇಲಿನ ಕ್ರೂರ ಅತ್ಯಾಚಾರ ಮತ್ತು ಕೊಲೆ ಹಾಗೂ ವಲಸೆ ಬಂದು ತೋರಣಗಲ್ಲಿನಲ್ಲಿ ನೆಲೆಸಿದ್ದ ಕುಟುಂಬದ ಆರು ವರ್ಷದ ಕಂದಮ್ಮನ ಮೇಲಿನ ಅತ್ಯಾಚಾರ ಎಲ್ಲರ ಮನಸ್ಸನ್ನು ಕಲಕಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ 2022ರಲ್ಲಿ 4.45 ಲಕ್ಷ ಮಹಿಳೆಯರ ಮೇಲೆ, 2019-2024 ರ ಮೇ ವರೆಗೆ ಒಟ್ಟು 2.99೯ ಲಕ್ಷ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 2023-25 ಜುಲೈ ವರೆಗಿನ ಅವಧಿಯಲ್ಲಿ 16273 ಲೈಂಗಿಕ ದೌರ್ಜನ್ಯ, 5456 ವರದಕ್ಷಿಣೆ ಕಿರುಕುಳ, 10510 ಪೋಕ್ಸೋ, 417 ಬಾಲ್ಯ ವಿವಾಹಗಳ ಜೊತೆಗೆ ಇತರೆ ಸೇರಿದಂತೆ ಒಟ್ಟು 43.52 ಪ್ರಕರಣಗಳು ದಾಖಲಾಗಿವೆ ಎಂದರು.

ಎಷ್ಟೋ ಅಪರಾಧಿಗಳು ತಾವು ಅತ್ಯಾಚಾರ ಎಸಗುವ ಮುನ್ನ ನೀಲಿ ಚಿತ್ರಗಳನ್ನು ವೀಕ್ಷಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇಂದು ಅಶ್ಲೀಲ ನೀಲಿ ಚಿತ್ರಗಳ ತಯಾರಿಕೆ ಮತ್ತು ವಿತರಿಸುವಿಕೆ ಒಂದು ಬೃಹತ್ ಲಾಭದ ಉದ್ಯಮವಾಗಿ ಮಾರ್ಪಾಡಾಗಿದೆ. ನರ ರೂಪದಲ್ಲಿರುವ ಅತ್ಯಾಚಾರಿಗಳ ಕ್ರೌರ್ಯಕ್ಕೆ ಬಲಿಯಾಗಿ ನರಳಾಡುತ್ತಿರುವ ಹೆಣ್ಣಿಗೆ ಸಾಂತ್ವನ, ಆತ್ಮವಿಶ್ವಾಸ, ಧೈರ್ಯ ನೀಡುವ ಬದಲಿಗೆ ಆ ಹೆಣ್ಣಿನ ಚಾರಿತ್ರ್ಯವನ್ನೇ ಪ್ರಶ್ನಿಸುವ ಸಮಾಜದ ಮನಸ್ಥಿತಿ ಅತ್ಯಂತ ಅಸಹ್ಯಕರವಾಗಿದೆ. ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದು ಅಪರಾಧಗಳಿಗೆ ಕೊನೆ ಹಾಕುವಲ್ಲಿ ಇಂದಿನ ಪೊಲೀಸ್, ಆಡಳಿತಾಂಗ ಮತ್ತು ನ್ಯಾಯಾಂಗ ಸಂಪೂರ್ಣವಾಗಿ ಸೋತಿವೆ. ಭಾರತದ ರಾಜಕಾರಣದಲ್ಲಿ ಅಪರಾಧಿ ಹಿನ್ನೆಲೆಯುಳ್ಳ ಶಾಸಕರು ಮತ್ತು ಸಚಿವರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚು ಕಡಿಮೆ ಎಲ್ಲಾ ರಾಜಕೀಯ ಪಕ್ಷಗಳು ಅಂತಹ ಅಭ್ಯರ್ಥಿಗಳಿಗೇ ಮಣೆ ಹಾಕುತ್ತಿವೆ ಎಂದರು.

ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮಾರ್ಚ್ 2026 ರವರೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಸಹಿ ಸಂಗ್ರಹಣಾ ಅಭಿಯಾನ, ಪ್ರತಿಭಟನೆಗಳು, ಸಭೆ-ಸಮಾವೇಶಗಳು, ಮೆರವಣಿಗೆ, ಗುಂಪು ಚರ್ಚೆಗಳು, ಸಿನಿಮಾ ಪ್ರದರ್ಶನ, ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲಾ ಸ್ತರದ ಮಹಿಳೆಯರನ್ನು ಜಾಗೃತಗೊಳಿಸುವ ಕಾರ್ಯಕೈಗೊಂಡಿದೆ. ಇದರ ಭಾಗವಾಗಿ ಜ.7 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅತ್ಯಾಚಾರಗಳ ಪ್ರಕರಣಗಳನ್ನು ತ್ವರಿತವಾಗಿ ನಡೆಸಲು ಫಾಸ್ಟ್‌ಟ್ಯಾಕ್ ಕೋರ್ಟ್‌ಗಳನ್ನು ಸ್ಥಾಪಿಸಿ. ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ನೀಡಬೇಕು, ಅಶ್ಲೀಲ ಸಿನಿಮಾ-ಸಾಹಿತ್ಯ, ಜಾಹೀರಾತು, ವೆಬ್‌ಸೈಟ್, ಮದ್ಯ-ಮಾದಕ ವಸ್ತುಗಳನ್ನು ನಿಷೇಧಿಸುವುದೂ ಸೇರಿದಂತೆ ಒಟ್ಟು 8 ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.ಎಐಎಂಎಸ್‌ಎಸ್‌ನ ಜಿಲ್ಲಾ ಸಂಚಾಲಕಿ ಸುಜಾತ ಡಿ.ಸಹಸಂಚಾಲಕಿ ಕುಮುದ, ಸದಸ್ಯರಾದ ಬಿಂದು, ಜ್ಯೋತಿ ಸುದ್ದಗೋಷ್ಠಿಯಲ್ಲಿ ಉಪಸ್ಥಿತರಿದ್ದರು.