ಕನ್ನಡ ಫಿಲಂ ಚೇಂಬರನ್ನು ರಾಜ್ಯಾದ್ಯಂತ ಸಂಘಟನೆ: ಎಂ.ಎಸ್.ರವೀಂದ್ರ

| Published : Jul 18 2025, 12:55 AM IST

ಕನ್ನಡ ಫಿಲಂ ಚೇಂಬರನ್ನು ರಾಜ್ಯಾದ್ಯಂತ ಸಂಘಟನೆ: ಎಂ.ಎಸ್.ರವೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

10 ವರ್ಷದವರೆಗೆ ಯಾವುದೇ ಹಣ ನೀಡುವಂತಿಲ್ಲ, ಅಜೀವ ಸದಸ್ಯರಾಗಿ ಉಳಿಯುತ್ತಾರೆ. ಇದರಲ್ಲೂ ಪದಾಧಿಕಾರಿಗಳ ಆಯ್ಕೆಗೆ ಸದಸ್ಯರಿಂದ ಚುನಾವಣೆ ನಡೆಯುತ್ತದೆ. ಈ ಕನ್ನಡ ಫಿಲಂ ಛೇಂಬರ್ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರನ್ನು ರಾಜ್ಯಾದ್ಯಂತ ಸಂಘಟಿಸಲಾಗುತ್ತಿದೆ ಎಂದು ನೂತನ ಕನ್ನಡ ಫಿಲಂ ಚೇಂಬರ್ ರಾಜ್ಯಾಧ್ಯಕ್ಷ ಎಂ.ಎಸ್.ರವೀಂದ್ರ ತಿಳಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಮ್ಮ ಕನ್ನಡ ಫಿಲಂ ಛೇಂಬರ್‌ನ್ನು ಸಂಘಟಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ 20 ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ಸಂಘಟಿಸಿದ್ದು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ನೇಮಕ ಮಾಡಲಾಗಿದೆ. ಇದರ ಮುಖ್ಯ ಕಚೇರಿ ಬೆಂಗಳೂರಿನ ಕೆಂಗೇರಿಯಲ್ಲಿದೆ ಎಂದರು.

ಈ ಛೇಂಬರನಲ್ಲಿ ಈಗಾಗಲೇ 950 ಮಂದಿ ಸದಸ್ಯರಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಇದ್ದು, ಇನ್ನು ಎಲ್ಲಾ ಜಿಲ್ಲೆಗಳಿಂದ ಸದಸ್ಯರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆ ನೋಂದಣಿ ಆದವರಿಗೆ ಐಡಿ ಕಾರ್ಡ್‌ ನೀಡಲಾಗುತ್ತದೆ ಎಂದರು.

ಕಡಿಮೆ ದರದಲ್ಲಿ ಚಲನ ಚಿತ್ರ ನಿರ್ಮಿಸುವವರಿಗೆ ಇದರಿಂದ ಸಹಕಾರವಾಗುತ್ತದೆ. ಸ್ಥಳೀಯ ಕಲಾವಿದರಿಗೆ ಅವಕಾಶಗಳು ದೊರೆಯುತ್ತದೆ. ಕಡಿಮೆ ಬಜೆಟ್‌ನಲ್ಲಿಯೇ ಚಿತ್ರಗಳನ್ನು ನಿರ್ಮಿಸಿ ರಿಲೀಸ್ ಮಾಡಬಹುದು. ಕಲಾವಿದರು 500, ಒಂದು ಫಿಲಂ ಟೈಟಲ್‌ಗೆ 500, ನಿರ್ದೇಶಕ 500, ನಿರ್ಮಾಪಕರಿಗೆ 2000 ಸದಸ್ಯತ್ವದ ಶುಲ್ಕವನ್ನು ಪಡೆದು ನೋಂದಾಯಿಸಲಾಗುತ್ತದೆ ಎಂದರು.

10 ವರ್ಷದವರೆಗೆ ಯಾವುದೇ ಹಣ ನೀಡುವಂತಿಲ್ಲ, ಅಜೀವ ಸದಸ್ಯರಾಗಿ ಉಳಿಯುತ್ತಾರೆ. ಇದರಲ್ಲೂ ಪದಾಧಿಕಾರಿಗಳ ಆಯ್ಕೆಗೆ ಸದಸ್ಯರಿಂದ ಚುನಾವಣೆ ನಡೆಯುತ್ತದೆ. ಈ ಕನ್ನಡ ಫಿಲಂ ಛೇಂಬರ್ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ಟಿ.ಎಂ.ಹೊಸೂರು ಮಹೇಶ್ ಅವರನ್ನು ನೇಮಕ ಮಾಡಿ ಗುರುತಿನ ಚೀಟಿ ವಿತರಿಸಿದರು. ಚಲನಚಿತ್ರ ನಿರ್ಮಾಪಕ ಮಧು, ಜಿಲ್ಲಾ ಉಪಾಧ್ಯಕ್ಷ ಸಿದ್ದೇಗೌಡ, ಕಲಾವಿದ ಹುಲಿಕೆರೆ ರಾಜಣ್ಣ, ಸೋಮಣ್ಣ, ಹನುಮಂತೇಗೌಡ, ಕಾ.ಎಚ್.ಡಿ.ಮಹದೇವು, ಚಂದಗಾಲು ಶಂಕರ್ ಸೇರಿದಂತೆ 15 ಮಂದಿ ನಿರ್ದೇಶಕರನ್ನು ನೇಮಿಸಿ ಎಲ್ಲಾ ಪದಾಧಿಕಾರಿಗಳಿಗೂ ಗುರುತಿನ ಕಾರ್ಡುಗಳ ವಿತರಿಸಲಾಯಿತು.