ಸಾರಾಂಶ
ಒಂದು ಕಾಲಕ್ಕೆ ಮಂಡ್ಯ ಬೆಲ್ಲ ಎನ್ನೋದು ಸ್ವಾಭಾವಿಕವಾಗಿ ಬೆಳೆದ ದೊಡ್ಡ ಬ್ರ್ಯಾಂಡ್ ಆಗಿತ್ತು. ಸಕ್ಕರೆ ನಾಡು ಖ್ಯಾತಿಯೂ ಇದ್ದ ಮಂಡ್ಯ ಜಿಲ್ಲೆಯಲ್ಲಿ 90ರ ದಶಕದಲ್ಲಿ 10 ಸಾವಿರಕ್ಕೂ ಹೆಚ್ಚು ಆಲೆಮನೆಗಳಿದ್ದವು. ಆದರೆ, ಕೃಷಿಯಲ್ಲಿ ಹಾಗು ನಮ್ಮ ಆಹಾರ ಕ್ರಮದಲ್ಲಿ ಆದ ಬದಲಾವಣೆಗಳಿಂದ ಮಂಡ್ಯ ಜಿಲ್ಲೆಯಲ್ಲೀಗ ಒಂದು ಸಾವಿರ ಆಲೆಮನೆಗಳಿದ್ದರೆ ಹೆಚ್ಚು ಎನ್ನುವಂತಾಗಿದೆ.
ಮಂಡ್ಯ ಬೆಲ್ಲದ ವೈಭವವನ್ನು ಮರಳಿ ತರಲು ಪಣತೊಟ್ಟು, ಮಂಡ್ಯದ ಒಂದು ಸಾವಿರ ರೈತರು ಸೇರಿ ಕಟ್ಟಿಕೊಂಡಿರುವ ಮಂಡ್ಯ ಬೆಲ್ಲ ರೈತ ಉತ್ಪಾದಕ ಸಂಸ್ಥೆ ಈಗ ಕಾರ್ಯೋನ್ಮುಖವಾಗಿದೆ.ಹಳೇ ಮೈಸೂರು ಭಾಗದ ರೈತರ ಮನೆ ಮುಂದೆ ಅಥವಾ ಹಿತ್ತಲಿನಲ್ಲಿ ಮನೆಗೆ ಬೇಕಾಗುವ ಸೊಪ್ಪು, ತರಕಾರಿ ಬೆಳೆಯುವ ಜಾಗವನ್ನು ಕೀರೆಮಡಿ ಎನ್ನಲಾಗುತಿತ್ತು. ಕಾರಸವಾಡಿ ಮಹದೇವು ಅವರ ಅಧ್ಯಕ್ಷತೆಯ ಮಂಡ್ಯ ಬೆಲ್ಲ ರೈತ ಉತ್ಪನ್ನ ಸಂಸ್ಥೆಯು ಕೀರೆಮಡಿ ಹೆಸರಿನಲ್ಲಿ ಸಾವಯವ ಬೆಲ್ಲ ತಯಾರಿಕೆ ಮತ್ತು ಮಾರುಕಟ್ಟೆ ಶುರು ಮಾಡಿದೆ.ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ನೆರವಿನೊಂದಿಗೆ ಬೆಲ್ಲದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ವೇಗ ನೀಡಿದೆ. 2021ರಲ್ಲಿ ಶುರುವಾದ ಈ ಸಂಸ್ಥೆಯು ಪ್ರಸ್ತುತ ವಾರ್ಷಿಕ ವಹಿವಾಟು ಒಂದು ಕೋಟಿ ರುಪಾಯಿ ದಾಟಿದೆ. ಸಂಸ್ಥೆಯು ಮುಂದಿನ ವರ್ಷಾಂತ್ಯಕ್ಕೆ 5 ಕೋಟಿ ರು. ವಹಿವಾಟು ನಡೆಸುವ ಗುರಿ ಹಾಕಿಕೊಂಡಿದೆ.ಕಾರಸವಾಡಿ ಮಹದೇವು ಅವರು ಈ ಮೊದಲು ಮಂಡ್ಯ ಆರ್ಗ್ಯಾನಿಕ್ ಸಂಸ್ಥೆಯ ಸಂಸ್ಥಾಪಕ ಸಿಇಓ ಆಗಿದ್ದರು. ಕಾರಣಾಂತರಗಳಿಂದ ಅದರಿಂದ ಹೊರಬಂದ ಅವರು, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ನಬಾರ್ಡ್ ಸಲಹೆಯಂತೆ ರೈತ ಉತ್ಪಾದಕ ಸಂಸ್ಥೆ ಕಟ್ಟಲು ರೈತರನ್ನು ಸಂಘಟಿಸುವ ಕೆಲಸ ಮಾಡಿದರು. ಸಾವಯವ ರೀತಿಯಲ್ಲಿ ಕಬ್ಬು ಬೆಳೆಯುವುದು, ಸಾವಯವ ಮಾದರಿಯಲ್ಲೇ ಬೆಲ್ಲ ತಯಾರಿಸುವಂತೆ ರೈತರನ್ನು ಪ್ರೇರೇಪಿಸುವ ಕೆಲಸಕ್ಕೆ ಕೈ ಹಾಕಿದರು. ಈ ಉತ್ಪಾದಕ ಸಂಸ್ಥೆಯ ಚಟುವಟಿಕೆ ಗಮನಿಸಿದ ಕಪೆಕ್ ನೆರವು ನೀಡಲು ಮುಂದಾಯಿತು.ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್‌ಗಾಗಿ 65 ಲಕ್ಷ ರು. ವೆಚ್ಚದಲ್ಲಿ ಯೋಜನೆ ಹಾಕಿಕೊಂಡು ಆಧುನಿಕ ಉಪಕರಣಗಳನ್ನು ಮಂಡ್ಯ ಬೆಲ್ಲ ರೈತ ಉತ್ಪಾದಕ ಸಂಸ್ಥೆ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಇದಕ್ಕಾಗಿ 25 ಲಕ್ಷ ರು. ಹಾಗೂ ಕಪೆಕ್ 15 ಲಕ್ಷ ರು. ನೀಡಿ ಮಾರ್ಗದರ್ಶನವನ್ನೂ ಮಾಡುತ್ತಿದೆ. ಪಿಎಂಎಫ್ಎಂಇ ಮೂಲಕ 5ನೇ ಅತೀ ದೊಡ್ಡ ಪ್ರಾಜೆಕ್ಟ್ ಇದಾಗಿದೆ.
ಕೀರೆಮಡಿ ಬೆಲ್ಲ ಈಗ 12 ಜಿಲ್ಲೆಗಳಲ್ಲಿ ಲಭ್ಯವಿದ್ದು, ಸುಮಾರು 5 ರಿಂದ 20 ಟನ್ ಕೀರೆಮಡಿ ಬೆಲ್ಲ ಮಾರಾಟ ಆಗುತ್ತಿದೆ. ಬೆಲ್ಲದ ಪುಡಿ, ಅಚ್ಚು ಬೆಲ್ಲ, ಆಣಿ ಬೆಲ್ಲ, 1 ಕೆಜಿಯ ಬಕೆಟ್ ಬೆಲ್ಲದ ರೂಪಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ಕೀರೆಮಡಿ ಬೆಲ್ಲಕ್ಕೆ ಅನೇಕ ರೈತ ಉತ್ಪಾದಕ ಸಂಸ್ಥೆಗಳೇ ಗ್ರಾಹಕರಾಗಿವೆ. ‘ಸಹಜ ಸಮೃದ್ಧ’, ‘ಆರ್ಗ್ಯಾನಿಕ್ ಮಂಡ್ಯ’ದ ಅಂಗಡಿಗಳಲ್ಲಿ ದೊರೆಯುತ್ತದೆ. ಇದಲ್ಲದೆ ಶ್ರೀರಂಗಪಟ್ಟಣ ತಾಲೂಕಿನ ಜೀಗುಂಡಿಪಟ್ಟಣದ ಬಳಿ ಒಂದು ಅಂಗಡಿಯನ್ನು ತೆರೆಯಲಾಗಿದೆ.ಬೆಲ್ಲದ ಜೊತೆಗೆ ಬೆಲ್ಲ ಬಳಸಿ ಮಾಡುವ ಉತ್ಪನ್ನಗಳಾದ ಚಿಕ್ಕಿ ಮಿಠಾಯಿ, ಬೆಲ್ಲದ ಬರ್ಫಿ, ಹೋಳಿಗೆಯನ್ನು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಮಾಡಿಸಲು ಸಿದ್ಧತೆ ನಡೆಸಲಾಗಿದೆ. ಬೆಲ್ಲ ಮತ್ತು ಬೆಲ್ಲದ ಉತ್ಪನ್ನಗಳನ್ನು ಕೀರಮಡಿ ಬ್ರ್ಯಾಂಡ್ ಹೆಸರಿನಲ್ಲೇ ಮಾರಲಾಗುವುದು. ಇದಕ್ಕಾಗಿ ಸಂಚಾರಿ ಅಂಗಡಿಗಳನ್ನೂ ರೂಪಿಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ನಮ್ಮ ಉತ್ಪನ್ನಗಳ ನೇರ ಮಾರಾಟ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಭವಿಷ್ಯದ ಯೋಜನೆಗಳನ್ನು ಮಂಡ್ಯ ಬೆಲ್ಲ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹದೇವು ಅವರು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ. ಟನ್‌ಗೆ 4500 ರು:ವಿದೇಶಿ ಮಾರುಕಟ್ಟೆ ಪ್ರವೇಶಿಸಲು ಬೆಲ್ಲ ತಯಾರಿಕೆ ಮಾತ್ರವಲ್ಲ ಕಬ್ಬು ಬೆಳೆಯುವ ವಿಧಾನವು ಸಂಪೂರ್ಣ ಸಾವಯವ ಆಗಿರಬೇಕು. ನಾವೀಗ ನಮ್ಮ ಸಂಸ್ಥೆಯ ಕಬ್ಬು ಬೆಳೆಗಾರರನ್ನು ಸಾವಯವ ಮಾದರಿಯಲ್ಲಿ ಬೆಳೆಯಲು ಪ್ರೋತ್ಸಾಹಿಸಿ, ಪ್ರೇರೇಪಿಸುತ್ತಿದ್ದೇವೆ. ರಸಾಯನಿಕ ಬಳಸಿ ಬೆಳೆಯುವ ಪ್ರತಿ ಟನ್ ಕಬ್ಬಿಗೆ ಮಾರುಕಟ್ಟೆಯಲ್ಲೀಗ 3,300 ರು. ದರ ಇದೆ. ಯಾವುದೇ ರಸಾಯನಿಕ ಬಳಸದೆ ಬೆಳೆಯುವ ಕಬ್ಬು ಬಿತ್ತನೆ ಸಮಯದಲ್ಲೇ ರೈತರೊಂದಿಗೆ ಪ್ರತಿ ಟನ್ ಕಬ್ಬಿಗೆ 4,500 ರು.ಗೆ ಸಾವಯವ ಆಲೆಮನೆಗಳೊಂದಿಗೆ ಖರೀದಿ ಒಪ್ಪಂದ ಮಾಡಿಸುತ್ತಿದ್ದೇವೆ. ಈ ಕಬ್ಬಿನಿಂದ ಮಾಡುವ ಬೆಲ್ಲವನ್ನು ಪ್ರೀಮಿಯಂ ಬೆಲ್ಲ ಎಂದೇ ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ ಎನ್ನುತ್ತಾರೆ ಕಾರಸವಾಡಿ ಮಹದೇವು.ಕೀರೆಮಡಿಯ ಪ್ರೀಮಿಯಂ ಬೆಲ್ಲ, ಬೆಲ್ಲದ ಉತ್ಪನ್ನಗಳನ್ನ ವಿದೇಶಕ್ಕೆ ರಫ್ತು ಮಾಡಲು ಜೈ ಕೇಶವ್ ಎಂಬ ರಫ್ತು ಕಂಪನಿ ಜೊತೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ರಫ್ತು ಆರಂಭವಾಗಲಿದೆ. ಆನ್‌ಲೈನ್ ಮಾರುಕಟ್ಟೆಯನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನಮ್ಮ 5 ಕೋಟಿ ರು. ವಹಿವಾಟಿನ ಗುರಿ ತಲುಪಲಿದ್ದೇವೆ ಎಂದು ಕಾರಸವಾಡಿ ಮಹದೇವು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೀರೆಮಡಿ ಬೆಲ್ಲಕ್ಕಾಗಿ ಸಂಪರ್ಕಿಸಿ – 9844884666 ಅಥವಾ 998036006615 ಲಕ್ಷ ರು. ಸಬ್ಸಿಡಿ ಪಡೆಯಿರಿಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರುಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು, ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 - 22243082. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್‌ಸೈಟ್‌ನಲ್ಲೂ ಮಾಹಿತಿ ಪಡೆಯಬಹುದು.