ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಗೂ ಬಸವ ಅನುಯಾಯಿಗಳೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿರುವ ರಸ್ತೆಯ ಸಮೀಪ ಪ್ರತಿಮೆ ಸ್ಥಾಪನೆಗೆ ಸ್ಥಳ ನಿಗದಿ ಪಡಿಸಿದ ನಂತರ ಮಾತನಾಡಿದ ಅವರು ಮಹಾಮಾನವತಾವಾದಿ ಬಸವೇಶ್ವರರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಮೆ ಸ್ಥಾಪನೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೂ ಬಸವೇಶ್ವರರ ಹೆಸರಿಡಲಾಗುವುದು ಎಂದು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಪಿಪಿ ವೃತ್ತದ ಬಳಿ ಜಗಜ್ಯೋತಿ ಬಸವೇಶ್ವರರ ಕಂಚಿನ ಅಶ್ವರೂಢ ಪ್ರತಿಮೆ ಸ್ಥಾಪನೆಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಸವ ಜಯಂತಿಯೊಳಗೆ ಪ್ರತಿಮೆಯನ್ನು ಸಾರ್ವಜನಿಕರಿಗೆ ಲೋಕರ್ಪಣೆ ಮಾಡಲಾಗುವುದು ಎಂದು ಶಾಸಕ ಕೆ. ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಹಾಗೂ ಬಸವ ಅನುಯಾಯಿಗಳೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿರುವ ರಸ್ತೆಯ ಸಮೀಪ ಪ್ರತಿಮೆ ಸ್ಥಾಪನೆಗೆ ಸ್ಥಳ ನಿಗದಿ ಪಡಿಸಿದ ನಂತರ ಮಾತನಾಡಿದ ಅವರು ಮಹಾಮಾನವತಾವಾದಿ ಬಸವೇಶ್ವರರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಮೆ ಸ್ಥಾಪನೆಯೊಂದಿಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೂ ಬಸವೇಶ್ವರರ ಹೆಸರಿಡಲಾಗುವುದು ಎಂದು ಘೋಷಿಸಿದರು.ಬೆಂಗಳೂರು ಮತ್ತು ಬಸವಕಲ್ಯಾಣದಲ್ಲಿ ಸ್ಥಾಪಿಸಿರುವ ಮಾದರಿಯಲ್ಲಿಯೇ ಬೃಹತ್ ಗಾತ್ರದ ಕಂಚಿನ ಅಶ್ವರೂಢ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ 40 ಲಕ್ಷ ಅನುದಾನ ಮಂಜೂರಾಗಿದೆ. ಇದಕ್ಕೆ ಬಸವ ಅನುಯಾಯಿಗಳು ಸ್ವಯಂಪ್ರೇರಿತವಾಗಿ ತನು, ಮನ, ಧನ ಸಹಕಾರ ನೀಡಲು ಮುಂದಾಗಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಅನುದಾನವನ್ನು ಸಹ ಸರ್ಕಾರದಿಂದ ತರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ವೀರಶೈವ ಲಿಂಗಾಯಿತ ಸಮಾಜದ ಮುಖಂಡರೂ ಆದ ಗಂಜಿಗೆರೆ ಚಂದ್ರಶೇಖರ್‌ ಮಾತನಾಡಿ, ತಾಲೂಕಿನ ಜನತೆಯ ದಶಕಗಳ ಕನಸು ಶಾಸಕರ ಇಚ್ಛಾಶಕ್ತಿಯಿಂದ ನನಸಾಗುತ್ತಿದೆ. ರೈಲು ಹಾಗೂ ಬಸ್ ನಿಲ್ದಾಣದ ಸಮೀಪದಲ್ಲೇ ಪ್ರತಿಮೆ ಸ್ಥಾಪನೆಯಾಗುವುದರಿಂದ ಸಂಚರಿಸುವ ಜನರಿಗೆ ಜಗಜ್ಯೋತಿ ಬಸವೇಶ್ವರರ ದರ್ಶನ ಸಿಗಲಿರುವುದು ಸಂತಸದ ವಿಚಾರ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್‌, ಹೇಮಾವತಿ ಶುಗರ್‌ ಕಾರ್ಖಾನೆಯ ನಿರ್ದೇಶಕ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಕಾಟಿಕೆರೆ ಉಮೇಶ್, ಮುರುಂಡಿ ಶಿವಯ್ಯ, ದಿವಾಕರ್‌, ಮಂಜಣ್ಣ, ದುಮೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಗೀಜಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಧರ್ಮೇಶ್, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ, ರೈತ ಸಂಘದ ಮುಖಂಡ ದಯಾನಂದ್, ಪುರಸಭೆ ಮಾಜಿ ಸದಸ್ಯರಾದ ಸುಬ್ರಮಣ್ಯ, ಬಾಬು, ಉಮಾಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.