. ಇಂದಿನ ಕಾಲದಲ್ಲಿ ದೇಶಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಹಿಂದೆ ಕತ್ತಿ ಹಿಡಿದು ಯುದ್ಧ ಮಾಡುತ್ತಿದ್ದರೆ, ಇಂದಿಗೆ ಅಣುಬಾಂಬ್‌ಗಳಂತಹ ವಿನಾಶಕಾರಿ ಆಯುಧಗಳನ್ನು ತಯಾರಿಸಿಕೊಂಡು ಮಾನವಕುಲವೇ ತನ್ನ ಅವನತಿಯ ದಾರಿಗೆ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ಅಳವಡಿಸಿಕೊಂಡು ನಾನು ರಾಜಕಾರಣ ಮಾಡುತ್ತಿದ್ದೇನೆ. ನಾನು ಮಾಡುವ ಪ್ರತಿಯೊಂದು ಕೆಲಸವೂ ಅರಸೀಕೆರೆ ಅಭಿವೃದ್ಧಿಯತ್ತ ಮುಖ ಮಾಡಿರುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ 35 ದಾರ್ಶನಿಕರ ಪುತ್ಥಳಿಗಳನ್ನು ನಿರ್ಮಿಸಲು ಜಾಗವನ್ನು ನಿಗದಿಪಡಿಸಿ ಬನ್ನಿ, ಪುತ್ಥಳಿ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು. ದಾರ್ಶನಿಕರ ಪುತ್ಥಳಿಗಳನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ನಗರದ ಎಪಿಎಂಸಿ ಮಾರ್ಕೆಟ್ ಸಮೀಪದ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಗಂಗಾಪರಮೇಶ್ವರಿ ಅಮ್ಮನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ನಾವೆಲ್ಲರೂ ಸನಾತನ ಧರ್ಮವನ್ನು ಪಾಲಿಸಿ, ಉಳಿಸಿ ಬೆಳೆಸಬೇಕು. ಇಂದಿನ ಕಾಲದಲ್ಲಿ ದೇಶಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಹಿಂದೆ ಕತ್ತಿ ಹಿಡಿದು ಯುದ್ಧ ಮಾಡುತ್ತಿದ್ದರೆ, ಇಂದಿಗೆ ಅಣುಬಾಂಬ್‌ಗಳಂತಹ ವಿನಾಶಕಾರಿ ಆಯುಧಗಳನ್ನು ತಯಾರಿಸಿಕೊಂಡು ಮಾನವಕುಲವೇ ತನ್ನ ಅವನತಿಯ ದಾರಿಗೆ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ಅಳವಡಿಸಿಕೊಂಡು ನಾನು ರಾಜಕಾರಣ ಮಾಡುತ್ತಿದ್ದೇನೆ. ನಾನು ಮಾಡುವ ಪ್ರತಿಯೊಂದು ಕೆಲಸವೂ ಅರಸೀಕೆರೆ ಅಭಿವೃದ್ಧಿಯತ್ತ ಮುಖ ಮಾಡಿರುತ್ತದೆ ಎಂದು ಹೇಳಿದರು.ಇದೇ ವೇಳೆ ಗಂಗಾಪರಮೇಶ್ವರಿ ಅಮ್ಮನವರ ಕುರಿತು ಮಾತನಾಡಿದ ಅವರು, ಗಂಗಾಪರಮೇಶ್ವರಿ ಅಮ್ಮನವರು ಶಕ್ತಿ, ಶುದ್ಧತೆ ಮತ್ತು ಜೀವನದ ಮೂಲಸ್ವರೂಪದ ಸಂಕೇತವಾಗಿದ್ದಾರೆ. ಗಂಗೆಯ ಮಹಿಮೆ ಇಲ್ಲದೆ ಯಾವುದೇ ಪೂಜೆ ಪೂರ್ಣವಾಗುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಗಂಗೆಯ ಸ್ಥಾನ ಅತ್ಯುನ್ನತವಾಗಿದೆ. ಗಂಗಾಮಾತೆಯ ಆರಾಧನೆ ನಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಆತ್ಮಶುದ್ಧಿಯನ್ನು ತರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಅಂಬಿಗರ ಸಮುದಾಯದ ಮಹತ್ವ ಮತ್ತು ಅವರ ಪರಂಪರೆಯ ಬಗ್ಗೆ ವಿವರಿಸಿದರು.ಅಂಬಿಗರು ಜಗತ್ತಿಗೆ ರಾಮಾಯಣ, ಮಹಾಭಾರತಂತಹ ಶ್ರೇಷ್ಠ ಗ್ರಂಥಗಳನ್ನು ನೀಡಿದ ಪರಂಪರೆಯ ಸಮಾಜ. ಗಂಗಾಮತಸ್ಥ ಅಂಬಿಗರ ಸಮಾಜವು ಮಾನವೀಯ ಮೌಲ್ಯಗಳು, ಸೇವಾ ಮನೋಭಾವ ಮತ್ತು ತ್ಯಾಗದ ಪ್ರತೀಕವಾಗಿದೆ. ಎಂತಹ ಮಳೆ, ಗಾಳಿ, ಪ್ರವಾಹಗಳ ಮಧ್ಯೆಯೂ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಜನರನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸುವ ಸೇವೆಯನ್ನು ಅಂಬಿಗರು ಶತಮಾನಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಇದು ಕೇವಲ ವೃತ್ತಿ ಅಲ್ಲ, ಮಾನವ ಸೇವೆಯ ಮಹತ್ತರ ಧರ್ಮವಾಗಿದೆ ಎಂದು ಹೇಳಿದರು.ಅಂಬಿಗರ ಚೌಡಯ್ಯನವರು ಕೇವಲ ಸಮುದಾಯದ ನಾಯಕರು ಮಾತ್ರವಲ್ಲ, ಜಗತ್ತಿಗೆ ದಾರಿ ತೋರಿದ ಮಹಾನ್ ದಾರ್ಶನಿಕರು. ಅವರ ವಚನಗಳು ಮತ್ತು ವಿಚಾರಗಳು ವಿಶ್ವಮಟ್ಟದಲ್ಲಿ ಚಿಂತನೆಗೆ ಗ್ರಾಸವಾಗುವಂತಹವು. ಸಮಾನತೆ, ಸೇವೆ ಮತ್ತು ಸತ್ಯದ ಮಾರ್ಗವನ್ನು ಅವರು ಬೋಧಿಸಿದ್ದು, ಇಂದಿಗೂ ಅವು ಅತ್ಯಂತ ಪ್ರಸ್ತುತವಾಗಿವೆ ಎಂದು ತಿಳಿಸಿದರು.ನದಿ ಅಲ್ಲ; ಅದು ಜೀವನದ ಮೂಲ: ಗಂಗಾಮಾತೆಯ ಮಹತ್ವವನ್ನು ವಿವರಿಸಿದ ಅವರು ಕೇವಲ ಒಂದು ನದಿ ಅಲ್ಲ; ಅದು ಜೀವನದ ಮೂಲ. ಗಂಗಾಮಾತೆ ಶುದ್ಧತೆ, ಶಕ್ತಿ ಮತ್ತು ಜೀವನದ ಚೈತನ್ಯದ ಸಂಕೇತ. ಗಂಗೆಯನ್ನು ಆರಾಧಿಸುವ ಗಂಗಾಮತಸ್ಥರು ಪ್ರಕೃತಿಯೊಂದಿಗೆ ಒಗ್ಗಟ್ಟಾಗಿ ಬದುಕುವ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಅವರ ಜೀವನಶೈಲಿ ಮತ್ತು ಸಂಸ್ಕೃತಿ ಸಮಾಜಕ್ಕೆ ಆದರ್ಶವಾಗಬೇಕು ಎಂದು ಹೇಳಿದರು. ಅಂಬಿಗರ ಚೌಡಯ್ಯನವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಹೇಳಿದ ಅವರು, ಅವರ ಪುತ್ಥಳಿ ನಿರ್ಮಾಣ, ಸಂಸ್ಕೃತಿ ಸಂರಕ್ಷಣೆ ಮತ್ತು ಸಮಾಜದ ಏಕತೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಭೂಮಿಯ ಮೇಲೆ ಜೀವಸೃಷ್ಟಿ ನೀರಿನಿಂದ ಉದ್ಭವವಾಗಿದೆ ಎಂಬುದನ್ನು ಡಾರ್ವಿನ್ ಸಿದ್ಧಾಂತದ ಮೂಲಕ ವಿವರಿಸಿದರು. ದೇಹ ಪಂಚಭೂತಗಳಿಂದ ನಿರ್ಮಿತವಾಗಿದ್ದು, ಜೀವನದಲ್ಲಿ ನೀರಿನ ಮಹತ್ವವನ್ನು ಒತ್ತಿಹೇಳಿದರು. ಗಂಗೆಯಿಲ್ಲದೆ ಯಾವುದೇ ಪೂಜೆ ನಡೆಯುವುದಿಲ್ಲ ಮತ್ತು ಭಾರತ ಮಾತ್ರವಲ್ಲದೆ ಮಾರಿಷಿಯಸ್, ಕಾಂಬೋಡಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಗಂಗೆಯನ್ನು ಪೂಜಿಸಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಸಮಾಜದ ಬಾಂಧವರು ಮನವಿ ಸಲ್ಲಿಸಿದ್ದು, ಅದಕ್ಕೆ ಸ್ಪಂದಿಸಿದ ಶಾಸಕರು ಜಾಗವನ್ನು ಗುರುತಿಸಿ ಬನ್ನಿ, ಅಗತ್ಯ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಮಾತನಾಡಿ, ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡದಿಂದ ಎಸ್‌ಟಿ ವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಕೇಶವಮೂರ್ತಿ, ಡಿ.ಆರ್. ಕೇಶವಮೂರ್ತಿ, ಶಿವಣ್ಣ, ಕುಮಾರ್, ಧರ್ಮಪ್ಪ, ಹನುಮಂತು, ಗೋಪಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.