ಹುಬ್ಬಳ್ಳಿ: ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ಸಿಗುತ್ತದೆ ಎಂಬುದಕ್ಕೆ ಲಿಂಗರಾಜ ಪಾಟೀಲ ಹಾಗೂ ಎಂ.ನಾಗರಾಜ ಅವರೇ ಉತ್ತಮ ಉದಾಹರಣೆ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ಇನ್ನಷ್ಟು ಕಾರ್ಯಕರ್ತರಿಗೆ ಸ್ಥಾನಮಾನ ಸಿಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಅರವಿಂದ ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ, ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಎಂ. ನಾಗರಾಜ್ ಮತ್ತು ವಿಧಾನಪರಿಷತ್‌ಗೆ ಆಯ್ಕೆಯಾದ ಲಿಂಗರಾಜ್ ಪಾಟೀಲರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಕುಟುಂಬ ರಾಜಕಾರಣ ಮಾಡುತ್ತಿವೆ. ಇದರಿಂದ ಆ ಪಕ್ಷದ ನಾಯಕರು ರಾಜಕೀಯ ಭವಿಷ್ಯ ಹುಡುಕಿಕೊಂಡು ಆ ಮೂಲ ಪಕ್ಷಗಳಿಂದ ದೂರವಾಗುತ್ತಿದ್ದಾರೆ. ಹೊರತು ಬಿಜೆಪಿಯು ಯಾವುದೇ ಪಕ್ಷಗಳನ್ನು ಒಡೆಯುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಅವರು, ಪಕ್ಷಗಳು ಕುಟುಂಬಕ್ಕೆ ಆದ್ಯತೆ ನೀಡುವುದರಿಂದ ಪಕ್ಷಕ್ಕೆ ದುಡಿದವರಿಗೆ ಅವಕಾಶ ಸಿಗುವುದಿಲ್ಲ. ಹಾಗಾಗಿ ಸಹಜವಾಗಿ ಭವಿಷ್ಯವನ್ನು ಅರಸುತ್ತಾರೆ. ಆದರೆ, ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುತ್ತಿದೆ. ಇದಕ್ಕೆ ಲಿಂಗರಾಜ ಪಾಟೀಲ, ಎಂ. ನಾಗರಾಜ ಅವರೇ ಸಾಕ್ಷಿ ಎಂದರು.
ಲಿಂಗರಾಜ್ ಪಾಟೀಲ ಈದ್ಗಾ ಮೈದಾನ ಹೋರಾಟದ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದರೆ, ಕಾಲೇಜು ದಿನಗಳಲ್ಲೆ ಎಬಿವಿಪಿ ಸೇರುವ ಮೂಲಕ ವಿದ್ಯಾರ್ಥಿ ಸಂಘಟನೆಯೊಂದಿಗೆ ಎಂ.ನಾಗರಾಜ ಬಂದಿದ್ದಾರೆ. ಎಬಿವಿಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸ್ಥಾನಮಾನ ವಿಚಾರ ಬಂದಾಗ ಪ್ರತಿ ಸಲವೂ ಇವರಿಬ್ಬರಿಗೆ ಕೈ ತಪ್ಪುತಿತ್ತು. ಆದರೆ, ಈ ಬಾರಿ ಪಕ್ಷ ಅವರನ್ನು ಗುರುತಿಸಿದೆ. ಈ ಹಿನ್ನೆಲೆಯಾಗಿ ನಾನೂ ಒಂದಷ್ಟು ಮಾಹಿತಿ ಕಳುಹಿಸಿದ್ದೆ ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಆಯ್ಕೆಯಾದ ಸಂಸದ, ಶಾಸಕರು ಹುಬ್ಬಳ್ಳಿಯವರೇ ಆಗಿದ್ದು ಇನ್ನಷ್ಟುಶಕ್ತಿ ಬಂದಂತಾಗಿದೆ. ಎಲ್ಲರೂ ಸೇರಿ ಹುಬ್ಬಳ್ಳಿ-ಧಾರವಾಡವನ್ನು ಮಾದರಿ ನಗರಗಳನ್ನಾಗಿಸಲು ಪ್ರಯತ್ನಿಸೋಣ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ ಮಾತನಾಡಿದರು. ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಮುಖಂಡರಾದ ಜಯತೀರ್ಥ ಕಟ್ಟಿ, ಗೋವಿಂದ ಜೋಶಿ, ಮಾಜಿ ಶಾಸಕ ಅಶೋಕ ಕಾಟವೆ, ಉಮೇಶ ದುಶಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು. ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಲಿಂಗರಾಜ ಪಾಟೀಲ ಹಾಗೂ ಎಂ.ನಾಗರಾಜ ಅವರನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಪಕ್ಷದ ಕಚೇರಿಗೆ ಬರಮಾಡಿಕೊಳ್ಳಲಾಯಿತು. ಮುಖಂಡರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.ಧರ್ಮಸ್ಥಳದಲ್ಲಿನ ಶಾಸಕಾಂಕ ಸಭೆ ಕೈಬಿಡುವಂತೆ ಸಲಹೆ
ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಆರೋಪ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಕರೆದಿರುವ ಬಿಜೆಪಿ ಶಾಸಕಾಂಗ ಸಭೆಯನ್ನು ಕೈ ಬಿಡುವಂತೆ ಸಲಹೆ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನದಿಂದಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ಮನನೊಂದು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ. ಹೇಳಿಕೆ ಗಮನಿಸಿ ಅವರೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದ ವಿಚಾರವನ್ನು ಅಂತಹ ಪರಿಸರದಲ್ಲಿ ಚರ್ಚಿಸುವುದು, ಆಣೆ ಪ್ರಮಾಣ ಮಾಡುವುದು ಸರಿಯಲ್ಲ. ಹಾಗಾಗಿ ಅದನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಈ ಸಲಹೆಯನ್ನು ಸ್ವೀಕರಿಸುವುದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.ಅಡ್ಡ ಮತದಾನ ಮಾಡಿದವರ ಪತ್ತೆಗೆ ಈಗಾಗಲೇ ಸಮಿತಿ ರಚಿಸಿದೆ. ಇದರಲ್ಲೂ ಪತ್ತೆಯಾಗದಿದ್ದರೂ ಮುಂದೊಂದು ದಿನ ಅವರು ಸಿಗುತ್ತಾರೆ. ಅವರಿಗೆ ಸೂಕ್ತ ಪಾಠ ಕಲಿಸುತ್ತೇವೆ ಎಂದರು.