ತುಳು ಭಾಷೆ ಸ್ಥಾನಮಾನ: 3 ರಾಜ್ಯಗಳಿಗೆ ಸರ್ಕಾರ ಪತ್ರ

| Published : Feb 25 2024, 01:47 AM IST

ಸಾರಾಂಶ

ಇನ್ನೊಂದು ವಾರದಲ್ಲಿ ತುಳುನಾಡಿನ ಎಲ್ಲ ಸಂಘ ಸಂಸ್ಥೆಗಳು, ಎಲ್ಲ ರಂಗಗಳ ಪ್ರಮುಖರು ಹಾಗೂ ಜನಸಾಮಾನ್ಯರ ಸಂವಾದ ಸಭೆಯನ್ನು ಮಾ.2ರಂದು ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ಆಯೋಜಿಸಲಾಗುವುದು. ಇದರಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಾವ ಹೇಳಿದರು

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವುದು ಮತ್ತು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳುವ ಹೋರಾಟಕ್ಕೆ ಪೂರಕವಾಗಿ ಪಿಎಂ ಮತ್ತು ಸಿಎಂಗೆ ಪತ್ರ ಅಭಿಯಾನ ಯಶಸ್ವಿಯಾಗಿದೆ. ಇದರ ಫಲವಾಗಿ ಪೂರಕ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರವು, ಈಗಾಗಲೇ ಒಂದಕ್ಕಿಂತ ಹೆಚ್ಚು ಭಾಷೆಗಳಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಪತ್ರ ಬರೆದು, ಯಾವ ಅಂಶಗಳ ಆಧಾರದ ಮೇಲೆ ಈ ಸ್ಥಾನಮಾನ ನೀಡಲಾಗಿದೆ ಎಂದು ವರದಿ ಸಹಿತ ಮಾಹಿತಿ ಕೇಳಿದೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಮಾನ್ಯತೆ ನೀಡುವಂತೆ ಆಗ್ರಹಿಸಿ ಕಳೆದೆರಡು ತಿಂಗಳಿನಿಂದ ನಡೆದ ಪತ್ರ ಅಭಿಯಾನದಲ್ಲಿ ಸಾವಿರಾರು ಮಂದಿ ಪ್ರಧಾನಿ ಮತ್ತು ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಸಿಎಂ ಮಂಗಳೂರು ಭೇಟಿ ವೇಳೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದರು. ನಾಳೆ ಅಧಿವೇಶನದಲ್ಲಿ ಚರ್ಚೆ:

ಈ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಸೋಮವಾರ ಚರ್ಚೆ ನಡೆಯಲಿದೆ. ವಿಧಾನ ಪರಿಷತ್‌ನಲ್ಲಿ ಬಿ.ಎಂ. ಫಾರೂಕ್‌ ಅವರು ಈ ವಿಚಾರದ ಕುರಿತು ಪ್ರಸ್ತಾಪ ಮಾಡಲಿದ್ದು, ಅರ್ಧ ಗಂಟೆ ಕಾಲ ಚರ್ಚೆ ನಡೆಯಲಿದೆ. ಅಲ್ಲದೆ ವಿಧಾನಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಪ್ರಶ್ನೆ ಹಾಕಿದ್ದು, ಸೋಮವಾರವೇ ಚರ್ಚೆಗೆ ಬರಲಿದೆ ಎಂದು ಬಾವ ತಿಳಿಸಿದರು.

ಮಾ.2ರಂದು ಸಭೆ: ಇನ್ನೊಂದು ವಾರದಲ್ಲಿ ತುಳುನಾಡಿನ ಎಲ್ಲ ಸಂಘ ಸಂಸ್ಥೆಗಳು, ಎಲ್ಲ ರಂಗಗಳ ಪ್ರಮುಖರು ಹಾಗೂ ಜನಸಾಮಾನ್ಯರ ಸಂವಾದ ಸಭೆಯನ್ನು ಮಾ.2ರಂದು ಸಂಜೆ 5 ಗಂಟೆಗೆ ಮಂಗಳೂರು ನಗರದಲ್ಲಿ ಆಯೋಜಿಸಲಾಗುವುದು. ಇದರಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಬಾವ ಹೇಳಿದರು. ತುಳುನಾಡು ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.

ಕಾಂಗ್ರೆಸ್‌ನಿಂದ ಮತ್ತೆ ಆಹ್ವಾನ!

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಇತ್ತೀಚೆಗೆ ಭೇಟಿಯಾದಾಗ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಆದರೆ ಸ್ಥಳೀಯ ಕೆಲವು ನಾಯಕರ ವಿರೋಧ ಇದೆ. ಇನ್ನೂ ಯಾವ ನಿರ್ಧಾರ ಕೈಗೊಂಡಿಲ್ಲ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ, ಪ್ರಸ್ತುತ ಜೆಡಿಎಸ್‌ನಲ್ಲಿರುವ ಮೊಹಿಯುದ್ದೀನ್‌ ಬಾವ ಹೇಳಿದ್ದಾರೆ.

ಸುರ್ಜೇವಾಲಾ ಬಳಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡದೆ ಅನ್ಯಾಯ ಮಾಡಿರುವ ಬಗ್ಗೆ ಹೇಳಿದ್ದೇನೆ. ನಾನೀಗ ಜೆಡಿಎಸ್‌ನಲ್ಲಿದ್ದರೂ ರಾಜಕೀಯವಾಗಿ ಸ್ವತಂತ್ರವಾಗಿದ್ದೇನೆ. ತಪ್ಪು ನಡೆದರೆ ಯಾವ ಪಕ್ಷದ ವಿರುದ್ಧವೂ ಮಾತನಾಡುತ್ತೇನೆ. ಆದರೆ ಸ್ವಾಭಿಮಾನ ಬಿಟ್ಟು ಹೋಗಲ್ಲ ಎಂದರು.