ಸಾರಾಂಶ
ದಾಂಡೇಲಿ: ರೋಗ ಬಂದ ನಂತರ ಹೋರಾಡುವ ಬದಲು ರೋಗ ಬರದಂತೆ ನೋಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಜೀವನವನ್ನು ಸಾಗಿಸಬೇಕು. ಉತ್ತಮ ಆರೋಗ್ಯ ಎಲ್ಲರ ಹಕ್ಕು ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶೆ ರೋಹಿಣಿ ಬಸಾಪುರ ತಿಳಿಸಿದರು.ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಹಳೇ ದಾಂಡೇಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಮತ್ತು ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತನ್ನು ಕಾಡುತ್ತಿರುವ ಮಾರಕ ರೋಗವಾದ ಏಡ್ಸ್‌ಗೆ ನಿರ್ದಿಷ್ಟವಾಗಿ ಯಾವುದೇ ಔಷಧ ಇಲ್ಲ. ಮುನ್ನೆಚ್ಚರಿಕೆ ಕ್ರಮಗಳೇ ರೋಗವನ್ನು ನಿಯಂತ್ರಿಸಲು ಇರುವ ಮಾರ್ಗ. ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಜಾಗೃತರಾಗಬೇಕು ಎಂದ ಅವರು, ಕಾಲೇಜು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದ ಆಸ್ತಿಯಾಗಬೇಕು. ಅಂಗವಿಕಲರನ್ನು ಸಮಾಜವು ಸಮಾನವಾಗಿ ನೋಡಬೇಕು ಎಂದರು.ದಾಂಡೇಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಕುಲಕರ್ಣಿ ಮಾತನಾಡಿ, ಏಡ್ಸ್ ಪೀಡಿತರಿಗೆ ಇರುವ ಕಾನೂನಿನ ರಕ್ಷಣೆ ಹಾಗೂ ಪರಿಹಾರ, ಸಂರಕ್ಷಣೆ ಕುರಿತು ಹಾಗೂ ಅಂಗವಿಕಲರಿಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಅವಕಾಶವಿದೆ. ಕಾನೂನು ಸಾಮಾಜಿಕ ನ್ಯಾಯವನ್ನು ನೀಡಿದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪ ತುರುಮರಿ ಅವರು, ಏಡ್ಸ್ ಮೂಲ, ಹರಡುವಿಕೆ, ನಿಯಂತ್ರಣ, ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ, ಸುರಕ್ಷಿತ ಲೈಂಗಿಕ ಜ್ಞಾನದ ಕುರಿತು ಉಪನ್ಯಾಸ ನೀಡಿದರು.ದಾಂಡೇಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ತ್ರಿವೇಣಿ ನಾಯಕ ಮಾತನಾಡಿ, ಜಂತುಹುಳು ನಿವಾರಣೆ ಹಾಗೂ ಮಕ್ಕಳು ಜಂತುಹುಳು ಮಾತ್ರೆ ಸೇವನೆ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ನಾಗರೇಖಾ ಗಾಂವಕರ ವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲರಾದ ಎಂ.ಸಿ. ಹೆಗಡೆ, ಸೋಮಕುಮಾರ ಎಸ್., ಗುರುಬಸಯ್ಯ ಮಠಪತಿ, ತಾಲೂಕು ವಿಕಲಚೇತನರ ಇಲಾಖೆ ಸಿಬ್ಬಂದಿಗಳಾದ ರಾಮದಾಸ್ ನಾಯ್ಕ, ಅರ್ಜುನ, ರಾಹುಲ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು. ಹಳಿಯಾಳದ ಎಸ್.ಟಿ.ಎಸ್. ರಾಹುಲ ಭಾವಕರ ಸ್ವಾಗತಿಸಿದರು. ವಿದ್ಯಾರ್ಥಿ ಗೌರಿ ಪ್ರಾರ್ಥಿಸಿದರು.
ಉಪನ್ಯಾಸಕ ಪ್ರವೀಣ ಸುಲಾಖೆ ನಿರೂಪಿಸಿದರು. ಉಪನ್ಯಾಸಕಿ ಪೂರ್ಣಿಮಾ ಬೆಳವಡಿ ವಂದಿಸಿದರು. ಉಪನ್ಯಾಸಕಿಯರಾದ ಸುಮಂಗಲಾ ನಾಯ್ಕ, ಮಂಜುಳಾ ಹಳಿಯಾಳಕರ, ಉಷಾ ಸಲಗಾಂವಕರ, ವಿದ್ಯಾ, ಸಂಚಿತಾ ಕಾರ್ಯಕ್ರಮಕ್ಕೆ ಸಹಕರಿಸಿದರು.ಸಿಎಂ ಜತೆ ಶಾಸಕ ಶಿವರಾಮ ಹೆಬ್ಬಾರ್ ಚರ್ಚೆ
ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರು ಡಿ. ೯ರಂದು ಬೆಳಗಾವಿಯ ಸುವರ್ಣಸೌಧದ ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕುರಿತಂತೆ ಭೇಟಿಯಾಗಿ, ಚರ್ಚಿಸಿದರು.ತಟ್ಟಿಹಳ್ಳದಿಂದ ಯಲ್ಲಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಕೆಪಿಟಿಸಿಎಲ್ ಸಂಸ್ಥೆಯಿಂದ ಕೆಲವು ಕಾರ್ಯ ಬಾಕಿ ಇದ್ದು, ಕೆಪಿಟಿಸಿಎಲ್ ಸಂಸ್ಥೆಯು ಬಾಕಿ ಇರುವ ಕಾರ್ಯವನ್ನು ಸಂಪೂರ್ಣವಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಹಾಗೂ ಕ್ಷೇತ್ರದ ಹಲವಾರು ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದರು.