ಕನ್ನಡಪ್ರಭ ವಾರ್ತೆ ಮೂಡಲಗಿ ಜಾತ್ರಾ ಸಮಾರಂಭದಲ್ಲೂ ಪಕ್ಷ ರಾಜಕೀಯ, ಜಾತಿ ರಾಜಕೀಯ ಬೆರೆಸುವ ಮೂಲಕ ಸಾಮರಸ್ಯಕ್ಕೆ ಹಲವು ಜನ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅಂತವರಿಂದ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಜಾತ್ರಾ ಸಮಾರಂಭದಲ್ಲೂ ಪಕ್ಷ ರಾಜಕೀಯ, ಜಾತಿ ರಾಜಕೀಯ ಬೆರೆಸುವ ಮೂಲಕ ಸಾಮರಸ್ಯಕ್ಕೆ ಹಲವು ಜನ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಅಂತವರಿಂದ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಬೇಸರ ವ್ಯಕ್ತಪಡಿಸಿದರು.ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಹನುಮಂತ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಾತನಾಡಿದರು. ಆಧುನಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ಪಾಶ್ಚಿಮಾತ್ಯ ಶೈಲಿಯಲ್ಲಿ ಬದಲಾಗುತ್ತಿರುವುದು ವಿಷಾಧನೀಯ. ಗ್ರಾಮೀಣ ಭಾಗದಲ್ಲಿ ಜರುಗುತ್ತಿರುವ ಜಾತ್ರೆ, ಉತ್ಸವಗಳಲ್ಲಿ ಭಾಗವಹಿಸುವುದರಿಂದ ಸಂಬಂಧಗಳು ವೃದ್ಧಿಯಾಗುತ್ತವೆ. ಇದರಿಂದ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ. ಇಂದಿನ ಯುವಕರು ಇಂತಹ ಜಾತ್ರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ವೈಭವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಪ್ರಮುಖರಾದ ಲಿಂಗರಾಜ ಅಂಗಡಿ, ಬಸವರಾಜ ಗಾಡವಿ, ಬಸವರಾಜ ಬೆಂಡವಾಡೆ, ಈಶ್ವರ ಗಾಡವಿ, ಶಿವಾನಂದ ಹುನ್ನೋಳಿ, ಶಿವಾನಂದ ಅಂಗಡಿ, ಕೆಂಪಣ್ಣ ತೇಲಿ, ಶ್ರೀಮಂತ ಹುಬ್ಬನ್ನವರ, ಮಲ್ಲೇಶ ಹುಚ್ಚನ್ನವರ, ಮಹಾದೇವ ಭುಜನ್ನವರ, ಸುರೇಶ ತೊಕರಟ್ಟಿ, ಸದಾಶಿವ ಹುಚ್ಚನ್ನವರ ಸೇರಿದಂತೆ ಹನುಮ ಮಾಲಾಧಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.