ಉತ್ತಮ ಆರೋಗ್ಯಕ್ಕೆ ಚಿಂತೆಯಿಂದ ದೂರವಿರಿ: ಡಾ. ವೆಂಕಟೇಶ ರಾಥೋಡ

| Published : Oct 11 2025, 12:03 AM IST

ಸಾರಾಂಶ

ಇತ್ತಿಚೀನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಒತ್ತಡದ ಬದುಕು, ಕಲುಷಿತ ಆಹಾರ ಇತ್ಯಾದಿಗಳಿಂದ ಅನೇಕ ರೋಗಗಳು ಕಾಡುತ್ತವೆ.

ಲಕ್ಷ್ಮೇಶ್ವರ: ವಯಸ್ಸಿನ ಹಿನ್ನೆಲೆ ಕೆಲವೊಂದು ರೋಗಗಳು ಕಾಣಿಸಿಕೊಳ್ಳುವದು ಸಹಜ. ಅವುಗಳನ್ನು ಗುಣಪಡಿಸಬಹುದು. ಆದರೆ ಚಿಂತೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಚಿಂತೆ ಮಾಡದೆ ನಿರಾಳವಾಗಿ ಇಳಿ ವಯಸ್ಸಿನ ಜೀವನ ನೆಮ್ಮದಿಯಿಂದ ಸಾಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ ತಿಳಿಸಿದರು.ಪಟ್ಟಣದ ಜಿ.ಎಫ್. ಉಪನಾಳ ಪ್ರತಿಷ್ಠಾನ ಟ್ರಸ್ಟ್‌ ಶಾಂತಿಧಾಮ ವೃದ್ಧಾಶ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಮೀಕ್ಷಣಾ ಘಟಕದಿಂದ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಗುರುವಾರ ವೃದ್ಧರ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತಿಚೀನ ದಿನಗಳಲ್ಲಿ ಹವಾಮಾನ ವೈಪರಿತ್ಯ, ಒತ್ತಡದ ಬದುಕು, ಕಲುಷಿತ ಆಹಾರ ಇತ್ಯಾದಿಗಳಿಂದ ಅನೇಕ ರೋಗಗಳು ಕಾಡುತ್ತವೆ. ಬಿಪಿ, ಸಕ್ಕರೆ ಕಾಯಿಲೆ ವಯಸ್ಸಿನನುಗುಣವಾಗಿ ಬರುವುದರ ಜತೆ ಸಣ್ಣ ವಯಸ್ಸಿನಲ್ಲಿಯೂ ಇವು ಕಾಡಬಹುದು. ಆದರೆ ಇದಕ್ಕೆ ಸರಿಯಾದ ಊಟ, ದೇಹಕ್ಕೆ ತಕ್ಕ ವ್ಯಾಯಾಮ ಚಿಂತೆಯಿಲ್ಲದ ಜೀವನ ಸಾಗಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಶಾಂತಿಧಾಮ ವೃದ್ಧಾಶ್ರಮದಲ್ಲಿರುವ ಬಹುತೇಕ ಹಿರಿಯರು ಲವಲವಿಕೆಯಿಂದ ಇದ್ದು, ನಿತ್ಯ ವಾಕಿಂಗ್, ಸರಳ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದರು.ಆಶ್ರಮದಲ್ಲಿನ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಅವಶ್ಯವಿರುವ ಮಾತ್ರೆ, ಔಷಧಿಗಳನ್ನು ನೀಡಿ ಸಲಹೆಗಳನ್ನು ನೀಡಲಾಯಿತು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ. ರವಿ ಕಡಗಾವಿ, ಹಿರಿಯ ನಿವೃತ್ತ ವೈದ್ಯ ಡಾ. ಶಿವಾನಂದ ಹೂವಿನ್, ಶಾಂತಿಧಾಮ ವೃದ್ಧಾಶ್ರಮದ ಅಧ್ಯಕ್ಷ ಪ್ರಕಾಶ ಉಪನಾಳ, ಉಪಾಧ್ಯಕ್ಷ ದಿಗಂಬರ ಪೂಜಾರ, ಸಮುದಾಯ ಆರೋಗ್ಯಾಧಿಕಾರಿ ಬಸವಣ್ಣೆಮ್ಮ ನಾಗಣ್ಣವರ, ಈಶ್ವರ ಹಿರೇಮಠ, ನಿಲಯ ಮೇಲ್ವಿಚಾರಕಿ ಅಶ್ವಿನಿ ದೊಡ್ಡೂರು ಮತ್ತಿತರರು ಇದ್ದರು.