ಸಂಸ್ಥೆಯ ಬೈಲಾ ಪ್ರಕಾರ ಮಿಮ್ಸ್ ಕಚೇರಿ ಅಧೀಕ್ಷಕರ ಹುದ್ದೆ ಖಾಲಿಯಾದ ಬಳಿಕ ಆ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂಬ ಅಧಿಕಾರ ಮಿಮ್ಸ್ ನಿರ್ದೇಶಕರಿಗೆ ಇರುತ್ತದೆ. ಅದರಂತೆ ಆ ಹುದ್ದೆಗೆ ಎಲ್.ಪುಷ್ಪಲತಾ ಅವರನ್ನು ನಿರ್ದೇಶಕರು ನೇಮಕ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶ ಪತ್ರದ ಮೇರೆಗೆ ಕೆ.ನಾಗರಾಜು ಸಂಸ್ಥೆಯ ಆಡಳಿತಾಧಿಕಾರಿ ಕೃಷ್ಣಕುಮಾರ್ ಬಳಿ ತೆರಳಿದ್ದಾಗ ಗೊಂದಲ ಉಂಟಾಯಿತು. ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಎಲ್.ಪುಷ್ಪಲತಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರನ್ವಯ ನ್ಯಾಯಾಲಯ ಕೆ.ನಾಗರಾಜು ನೇಮಕಕ್ಕೆ ತಡೆಯಾಜ್ಞೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಸಂಸ್ಥೆಯ ಕಚೇರಿ ಅಧೀಕ್ಷಕರ ಹುದ್ದೆಗೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಕೆ.ನಾಗರಾಜು ಅವರ ನೇಮಕ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಭಾರ ಹುದ್ದೆಯಲ್ಲಿ ಕಚೇರಿಯ ಎಲ್‌.ಪುಷ್ಪಲತಾ ಅವರನ್ನೇ ಮುಂದುವರಿಸಲಾಗಿದೆ.

ಅಧೀಕ್ಷಕರಾಗಿದ್ದ ಚಂದ್ರಶೇಖರ್ ಅವರ ನಿವೃತ್ತಿ ಬಳಿಕ ಸಂಸ್ಥೆಯಲ್ಲೇ ಅರ್ಹರಿದ್ದರೂ ಮಿಮ್ಸ್ ನಿರ್ದೇಶಕರ ಗಮನಕ್ಕೆ ಬಾರದೆ ಅನ್ಯ ಇಲಾಖೆಯಿಂದ ಒಬ್ಬರನ್ನು ನಿಯೋಜಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಮುಖ್ಯ ಆಡಳಿತಾಧಿಕಾರಿ ಕೃಷ್ಣಕುಮಾರ್ ಅವರಿಗೆ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಯವರು ನೋಟೀಸ್ ಜಾರಿಗೊಳಿಸಿದ್ದಾರೆ.

ಪ್ರಕರಣವೇನು?:

ಮಿಮ್ಸ್ ಕಚೇರಿ ಅಧೀಕ್ಷಕರ ಹುದ್ದೆಯಲ್ಲಿದ್ದ ಚಂದ್ರಶೇಖರ್ ಅವರು ಸೆ.೩೦ರಂದು ಕರ್ತವ್ಯದಿಂದ ನಿವೃತ್ತರಾಗಿದ್ದರು. ಆನಂತರ ಖಾಲಿ ಇರುವ ಈ ಹುದ್ದೆಗೆ ಮಿಮ್ಸ್‌ನಲ್ಲಿ ಅರ್ಹರಿರುವ ನೌಕರರನ್ನೇ ನೇಮಕ ಮಾಡಬೇಕಿತ್ತು. ಸಂಸ್ಥೆಯ ಬೈಲಾ ಪ್ರಕಾರ ಅರ್ಹರನ್ನು ನೇಮಕ ಮಾಡುವ ಅಧಿಕಾರ ಮಿಮ್ಸ್ ನಿರ್ದೇಶಕರದ್ದಾಗಿತ್ತು.

ಆದರೆ, ಮಿಮ್ಸ್ ಕಚೇರಿ ಅಧೀಕ್ಷಕರ ಹುದ್ದೆಗೆ ಅನ್ಯ ಇಲಾಖೆಯಿಂದ ಬೇರೊಬ್ಬರನ್ನು ನೇಮಿಸಿಕೊಡುವಂತೆ ಮುಖ್ಯ ಆಡಳಿತಾಧಿಕಾರಿ ಕೃಷ್ಣಕುಮಾರ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಶಾಸಕರ ಕೋರಿಕೆ ಹಾಗೂ ಈ ಪತ್ರದ ಆಧಾರದ ಮೇಲೆ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ನಾಗರಾಜು ಅವರನ್ನು ಮಿಮ್ಸ್ ಆಡಳಿತಾತ್ಮಕ ಹಿತದೃಷ್ಟಿಯಿಂದ ಖಾಲಿ ಇರುವ ಹುದ್ದೆಗೆ ತಾತ್ಕಾಲಿಕವಾಗಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಿ ಆದೇಶಿಸಿದ್ದರು. ಇದರ ಜೊತೆಯಲ್ಲೇ ಲೋಕೋಪಯೋಗಿ ಇಲಾಖೆ ಅಧೀಕ್ಷಕರ ಹುದ್ದೆಯಲ್ಲೂ ಕರ್ತವ್ಯ ನಿರ್ವಹಿಸುವುದಕ್ಕೂ ಅವಕಾಶ ನೀಡಿ ಆದೇಶಿಸಿದ್ದರು.

ಹೈಕೋರ್ಟ್ ತಡೆಯಾಜ್ಞೆ:

ಸಂಸ್ಥೆಯ ಬೈಲಾ ಪ್ರಕಾರ ಮಿಮ್ಸ್ ಕಚೇರಿ ಅಧೀಕ್ಷಕರ ಹುದ್ದೆ ಖಾಲಿಯಾದ ಬಳಿಕ ಆ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂಬ ಅಧಿಕಾರ ಮಿಮ್ಸ್ ನಿರ್ದೇಶಕರಿಗೆ ಇರುತ್ತದೆ. ಅದರಂತೆ ಆ ಹುದ್ದೆಗೆ ಎಲ್.ಪುಷ್ಪಲತಾ ಅವರನ್ನು ನಿರ್ದೇಶಕರು ನೇಮಕ ಮಾಡಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶ ಪತ್ರದ ಮೇರೆಗೆ ಕೆ.ನಾಗರಾಜು ಸಂಸ್ಥೆಯ ಆಡಳಿತಾಧಿಕಾರಿ ಕೃಷ್ಣಕುಮಾರ್ ಬಳಿ ತೆರಳಿದ್ದಾಗ ಗೊಂದಲ ಉಂಟಾಯಿತು. ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಎಲ್.ಪುಷ್ಪಲತಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರನ್ವಯ ನ್ಯಾಯಾಲಯ ಕೆ.ನಾಗರಾಜು ನೇಮಕಕ್ಕೆ ತಡೆಯಾಜ್ಞೆ ನೀಡಿದೆ.

ಮುಖ್ಯ ಆಡಳಿತಾಧಿಕಾರಿಗೆ ನೋಟೀಸ್:

ಲೋಕೋಪಯೋಗಿ ಇಲಾಖೆ ಅಧೀಕ್ಷಕ ಕೆ.ನಾಗರಾಜು ಅವರನ್ನು ಮಿಮ್ಸ್ ಸಂಸ್ಥೆಯ ಕಚೇರಿ ಅಧೀಕ್ಷಕರ ಹುದ್ದೆಗೆ ನಿಯೋಜನೆಗೊಳಿಸಿರುವ ಸಂಬಂಧ ಮಿಮ್ಸ್ ಆಡಳಿತಾಧಿಕಾರಿ ಕೃಷ್ಣಕುಮಾರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೋಟೀಸ್ ಜಾರಿಗೊಳಿಸಿದ್ದಾರೆ. ಸಕ್ಷಮ ಪ್ರಾಧಿಕಾರವಾದ ಸಂಸ್ಥೆಯ ನಿರ್ದೇಶಕರ ಅನುಮತಿ ಇಲ್ಲದೆ ಕಚೇರಿ ಅಧೀಕ್ಷಕರ ಹುದ್ದೆಗೆ ಅನ್ಯ ಇಲಾಖೆಯಿಂದ ಒಬ್ಬರನ್ನು ನಿಯೋಜಿಸಿಕೊಡುವಂತೆ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಬಗ್ಗೆ ಮೂರು ದಿನಗಳೊಳಗೆ ಸರ್ಕಾರಕ್ಕೆ ವಿವರಣೆ ಸಲ್ಲಿಸುವಂತೆ ಅಧೀನ ಕಾರ್ಯದರ್ಶಿ ಬಾಲಪ್ಪ ಸೂಚಿಸಿದ್ದಾರೆ.