ಸಿದ್ದರಾಮಯ್ಯ ದೆಹಲಿಯಲ್ಲಿ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
ಕನ್ನಡಪ್ರಭ ವಾರ್ತೆ ನವದೆಹಲಿ
ವರಿಷ್ಠರ ಮಾತಿಗೆ ಸಮ್ಮತಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷಕ್ಕೆ ನಿಮ್ಮ ಅವಶ್ಯಕತೆ ತುಂಬಾ ಇದೆ. ಮುಂದೆಯೂ ಪಕ್ಷದ ಜೊತೆ ಇರಿ ಎಂದು ಮನವಿ ಮಾಡಿದ್ದಾರೆ. ರಾಹುಲ್ ಮನವಿಗೆ ಸಮ್ಮತಿ ಸೂಚಿಸಿರುವ ಸಿದ್ದರಾಮಯ್ಯ, ತಮಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ರಾಹುಲ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ, ಮುಂದಿನ ಸರ್ಕಾರ ರಚನೆ, ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ರಾಹುಲ್ ಜೊತೆ ಅವರು ಚರ್ಚೆ ನಡೆಸಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ದೆಹಲಿಯಲ್ಲಿ ಶುಕ್ರವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು.
ಬೆಳಗ್ಗೆ ಸೋನಿಯಾ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಜೊತೆ ಬ್ರೇಕ್ ಫಾಸ್ಟ್ ಮಾಡಿದರು. ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ರಾಹುಲ್‌ಗೆ ಧನ್ಯವಾದ ತಿಳಿಸಿದರು. ಈ ವೇಳೆ, ಹೈಕಮಾಂಡ್ ಮಾತಿಗೆ ಸಮ್ಮತಿಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದು ನಡೆಗೆ ಮೆಚ್ಚುಗೆ ಸೂಚಿಸಿ, ಧನ್ಯವಾದ ತಿಳಿಸಿದ ರಾಹುಲ್, ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ. ಪಕ್ಷದ ಜೊತೆ ಇರಿ ಎಂದು ಮನವಿ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು.ಇದೇ ವೇಳೆ, ಹೊಸ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಿದ ಸಿದ್ದರಾಮಯ್ಯ, ಸಚಿವ ಸಂಪುಟದಲ್ಲಿ ಹಿರಿಯ ನಾಯಕರಿಗೆ, ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಜೊತೆಗೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿಗಳ ಕುರಿತಾಗಿಯೂ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಸುಮಾರು ಒಂದು ಗಂಟೆ ಉಭಯ ನಾಯಕರು ಮಾತುಕತೆ ನಡೆಸಿದರು.
ಇದೇ ವೇಳೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಯೂ ಮಾತುಕತೆ ನಡೆಸಿದರು. ಬಳಿಕ, ರಾಜಾಜಿಮಾಗ್೯ ನಿವಾಸಕ್ಕೆ ತೆರಳಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹಾಜರಿದ್ದರು.ನಂತರ, ಲೋದಿ ಎಸ್ಟೇಟ್ ನಲ್ಲಿರುವ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ನಿವಾಸಕ್ಕೆ ಭೇಟಿ ನೀಡಿ, ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯ ಕುರಿತಾಗಿ ಮಾತುಕತೆ ನಡೆಸಿದರು.
ಮಾತುಕತೆ ಬಳಿಕ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟ ವೇಣುಗೋಪಾಲ್, ಕಾರಿನ ತನಕ ಬಂದು ಸಿದ್ದರಾಮಯ್ಯಗೆ ಬೀಳ್ಕೊಡುಗೆ ನೀಡಿದರು. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಬಳಿಕ, ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ಸಾದರು.