ಜೀವಪರ ನಿಲುವಿನ ಕಾವ್ಯ ರಚಿಸಲು ಮುಂದಾಗಿ: ಸಾಹಿತಿ ಸತೀಶ್ ಜವರೇಗೌಡ

| Published : Oct 08 2024, 01:05 AM IST

ಜೀವಪರ ನಿಲುವಿನ ಕಾವ್ಯ ರಚಿಸಲು ಮುಂದಾಗಿ: ಸಾಹಿತಿ ಸತೀಶ್ ಜವರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯದ ವಿಕೃತ ಮನೋಭಾವ ಹೆಚ್ಚುತ್ತಿದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೋಮುಗಲಭೆಗಳು ಉಲ್ಬಣಿಸಿವೆ. ಹಾಗಾಗಿ ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜೀವಪರ ಮತ್ತು ಪ್ರಗತಿಪರ ನಿಲುವಿನ ಕಾವ್ಯದ ಕೃಷಿಗೆ ಯುವ ಬರಹಗಾರರು ಮುಂದಾಗಬೇಕು ಎಂದು ಸಾಹಿತಿ ಟಿ.ಸತೀಶ್ ಜವರೇಗೌಡ ಕರೆ ನೀಡಿದರು.

ಪಟ್ಟಣದ ಪರಿವರ್ತನಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದಸರಾ ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ, ಜನ ಸಮುದಾಯವನ್ನು ಸತ್ಪಥದಲ್ಲಿ ನಡೆಸುವ, ಸತ್ಯದ ನೆಲೆಯೆಡೆಗೆ ಕೊಂಡೊಯ್ಯುವ, ಮಾನವೀಯ ಮೌಲ್ಯಗಳ ಬೆಳೆಸುವ ಕಾವ್ಯಗಳು ರಚಿಸುವತ್ತ ಕವಿಗಳು ಮುಂದಾಗಬೇಕು ಎಂದರು.

ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯದ ವಿಕೃತ ಮನೋಭಾವ ಹೆಚ್ಚುತ್ತಿದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೋಮುಗಲಭೆಗಳು ಉಲ್ಬಣಿಸಿವೆ. ಹಾಗಾಗಿ ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿರುವುದು ಅಪಾಯಕಾರಿಯಾದ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ. ಆದ್ದರಿಂದ ಕವಿಗಳು ಜವಾಬ್ದಾರಿಯಿಂದ ಕಾವ್ಯ ರಚಿಸಬೇಕು. ಕವಿಗಳ ಸಾಹಿತ್ಯ ಪ್ರತಿಭೆಯ ಅಭಿವ್ಯಕ್ತಿಗೆ ಸಾಮಾಜಿಕ ಜಾಲತಾಣ ಮುಕ್ತ ವೇದಿಕೆಯನ್ನು ಕಲ್ಪಿಸಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ಸಹೃದಯರಿಗೆ ಸಾಹಿತ್ಯ ತಲುಪಿಸಬಹುದು ಎಂದರು.

ಹಿರಿಯ ಸಾಹಿತಿ ಸಾ.ವೆ.ರಾ.ಸ್ವಾಮಿ‌ ಮಾತನಾಡಿ, ಕವಿಗಳು ತಮ್ಮ ಅನುಭವಗಳನ್ನು ಕಾವ್ಯದಲ್ಲಿ ತರಬೇಕು. ಬೇರೆಯವರ ನೋವುಗಳನ್ನು ತಮ್ಮದೆಂದು ಪರಿಭಾವಿಸಿ ಬರೆಯಬೇಕು. ಆಗ ಉತ್ತಮ ಕಾವ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ‌ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಸಿದ್ದಲಿಂಗು, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಕುಮಾರ್, ಪದಾಧಿಕಾರಿಗಳಾದ ಸಿ.ಸ್ವಾಮಿಗೌಡ, ಗಂಜಾಂ ಸುರೇಶ್, ಕೆ.ಬಿ. ಬಸವರಾಜ್ ಉಪಸ್ಥಿತರಿದ್ದರು. ಇಪ್ಪತ್ತಕೂ ಹೆಚ್ಚಿನ‌ ಕವಿಗಳು ತಮ್ಮ ಕವನಗಳ ವಾಚಿಸಿ ಗಮನಸೆಳೆದರು.