ಅರೆಸೇನಾ ಪಡೆ ನಿವೃತ್ತ ಯೋಧರಿಗೆ ಮಲತಾಯಿ ಧೋರಣೆ

| Published : Aug 10 2025, 01:30 AM IST

ಅರೆಸೇನಾ ಪಡೆ ನಿವೃತ್ತ ಯೋಧರಿಗೆ ಮಲತಾಯಿ ಧೋರಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ದೇಶವನ್ನು ಕಾಯುವ ಯೋಧರಿಗೆ ನೀಡುವ ಸರ್ಕಾರಿ ಸವಲತ್ತಿನಲ್ಲಿ ತಾರತಮ್ಯ ಇದೆ. ಅರೆಸೇನಾ ಪಡೆ ಯೋಧರು ಹಾಗೂ ಮಾಜಿ ಯೋಧರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಎಕ್ಸ್ ಪ್ಯಾರಾಮಿಲಿಟರಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಾಜಪ್ಪ ಬೇಸರ ವ್ಯಕ್ತಪಡಿಸಿದರು.

ರಾಮನಗರ: ದೇಶವನ್ನು ಕಾಯುವ ಯೋಧರಿಗೆ ನೀಡುವ ಸರ್ಕಾರಿ ಸವಲತ್ತಿನಲ್ಲಿ ತಾರತಮ್ಯ ಇದೆ. ಅರೆಸೇನಾ ಪಡೆ ಯೋಧರು ಹಾಗೂ ಮಾಜಿ ಯೋಧರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಎಕ್ಸ್ ಪ್ಯಾರಾಮಿಲಿಟರಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಾಜಪ್ಪ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಮಿ, ನೇವಿ ಮತ್ತು ಏರ್ ಫೋರ್ಸ್ ಸೈನಿಕರಿಗೆ ಸಿಗುವ ಸೌಲಭ್ಯ ಅರೆಸೇನಾ ಪಡೆಯ ಯೋಧರಿಗೂ ಸಿಗಬೇಕೆಂದು ಒತ್ತಾಯಿಸಿ ಬಹಳ ವರ್ಷಗಳಿಂದ ಅರೆಸೇನಾ ಪಡೆಯ ಮಾಜಿ ಯೋಧರು ಹೋರಾಟ ಮಾಡುತ್ತಿದ್ದೇವೆ. ಆದರೆ, ಇಲ್ಲಿವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.

ಸೈನಿಕರು ಯುದ್ಧದ ಸಮಯದಲ್ಲಿ ಮಾತ್ರ ದೇಶವನ್ನು ರಕ್ಷಣೆ ಮಾಡುತ್ತಾರೆ. ಆದರೆ, ಅರೆಸೇನಾ ಪಡೆಯ ಯೋಧರು ದುರ್ಗಮ ಸ್ಥಳಗಳಲ್ಲಿ ದಿನದ 24 ಗಂಟೆ ವರ್ಷದ 365 ದಿನವೂ ದೇಶದ ರಕ್ಷಣೆ ಮಾಡುತ್ತಾರೆ.

ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (BSF) 16 ಸಾವಿರ ಕಿ.ಮೀ ಗಡಿಯನ್ನು ಕಾಯುತ್ತಿದೆ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ (ITBP) 2.800 ಕಿ.ಮೀ. ಗಡಿ ಕಾಯುತ್ತಿದೆ.

ಸಶಸ್ತ್ರ ಸೀಮಾ ಬಲ (SSB) 1,250 ಕಿ.ಮೀ ಗಡಿ ಕಾಯುತ್ತಿದೆ. ಅಸ್ಸೋಂ ರೈಫಲ್ಸ್, ಸಿಐಎಸ್​​ಎಫ್, ಸಿಆರ್ ಪಿಎಫ್ ದೇಶದ ಆಂತರಿಕ ಸುರಕ್ಷೆಯಲ್ಲಿ ಬಹುಮುಖ್ಯ ಪಾತ್ರವಸುತ್ತಿವೆ. ಈ 6 ಅರೆಸೇನಾ ಪಡೆಗಳು ಕೇಂದ್ರೀಯ ಗೃಹ ಮಂತ್ರಾಲಯದ ವ್ಯಾಪ್ತಿಯಲ್ಲಿ ಬರುತ್ತಿದೆ. ಆದರೆ, ಕೇಂದ್ರ ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಬರುವ ಆರ್ಮಿ, ನೇವಿ ಮತ್ತು ಏರ್ ಫೋರ್ಸ್ ಯೋಧರಿಗೆ ಸಿಗುವ ಸರ್ಕಾರಿ ಸೌಲಭ್ಯ ಮಾತ್ರ ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿಲ್ಲ ಎಂದು ಹೇಳಿದರು.

ಆರ್ಮಿ, ನೇವಿ ಮತ್ತು ಏರ್ ಪೋರ್ಸ್ ಪಡೆಗಳ ಮುಖ್ಯಸ್ಥರು ಅಲ್ಲಿನ ಅಧಿಕಾರಿಗಳು ಆಗಿರುವುದರಿಂದ ಅವರು ಸೈನಿಕರ ಹಿತಾ ಕಾಯುತ್ತಾರೆ. ಅರೆಸೇನಾ ಪಡೆಗಳ ಮುಖ್ಯಸ್ಥರು ಐಪಿಎಸ್ ಅಧಿಕಾರಿಗಳಾಗಿರುತ್ತಾರೆ. ಹೀಗಾಗಿ ಅರೆಸೇನಾ ಪಡೆಯ ಯೋಧರ ಸಮಸ್ಯೆಗಳನ್ನು ತಿಳಿಯುವಷ್ಟರಲ್ಲಿ ಅವರ ವರ್ಗಾವಣೆಯಾಗಿರುತ್ತದೆ. ಆದ್ದರಿಂದ ಅರೆಸೇನಾ ಪಡೆಯ ಅಧಿಕಾರಿಗಳೇ ಮುಖ್ಯಸ್ಥರಾಗ ಬೇಕು ಎಂದು ಒತ್ತಾಯಿಸಿದರು.

ಅರೆಸೇನಾ ಪಡೆಯ ಯೋಧರು ವೀರಮರಣ ಹೊಂದಿದರೆ ಮಾತ್ರ ಅವರ ಮೃತದೇಹಗಳನ್ನು ಅವರ ಹುಟ್ಟೂರಿಗೆ ತರುವ ವ್ಯವಸ್ಥೆ ಮಾಡಿ, ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆ ವೇಳೆ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಸಹಾಯಹಸ್ತ ನೀಡುತ್ತೇವೆ ಎಂದು ಹೇಳಿ ಕೈ

ತೊಳೆದುಕೊಳ್ಳುತ್ತಾರೆ. ಅವರಿಗೆ ಹುತಾತ್ಮರ ದರ್ಜೆ ಕೂಡ ನೀಡುವುದಿಲ್ಲ ಎಂದು ರಾಜಪ್ಪ ತಿಳಿಸಿದರು.

ಮಾಜಿ ಯೋಧರಿಗೆ ಮಿಸಲಾತಿ ಕೊಡಿ:

ಹಾಸನ ಜಿಲ್ಲಾಧ್ಯಕ್ಷ ಪಿ.ವಿ.ನಾಗೇಶ್ ಮಾತನಾಡಿ, ಅರೆಸೇನಾ ಪಡೆಯ ಯೋಧ ತನ್ನ 18 ವರ್ಷಕ್ಕೆ ಸೇವೆಗೆ ಸೇರಿ 20 ವರ್ಷ ದೇಶ ಸೇವೆ ಮಾಡುತ್ತಾನೆ. ತನ್ನ ಯೌವನದ 20 ವರ್ಷಗಳನ್ನು ದೇಶಕ್ಕಾಗಿ ಕೊಡುತ್ತಾನೆ. 20 ವರ್ಷಗಳ ಸೇವೆಯಲ್ಲಿ ಕುಟುಂಬದೊಂದಿಗೆ ಕಳೆಯಲು 3 ವರ್ಷ ರಜೆ ಸಹ ಸಿಗುವುದಿಲ್ಲ. ಕೇಂದ್ರ ಗೃಹ ಸಚಿವರು ವರ್ಷಕ್ಕೆ 100 ದಿನಗಳ ರಜೆಯನ್ನು ನೀಡಿದರು. ಆದರೆ, ಕೇಂದ್ರ ಗೃಹ ಮಂತ್ರಾಲಯದ ಐಪಿಎಸ್ ಅಧಿಕಾರಿಗಳು ಅರೆಸೇನಾ ಪಡೆ ಸಿವಿಲ್ ಪೋರ್ಸ್ ಎಂಬ ಕಾರಣಕ್ಕೆ ಈ ಆದೇಶವನ್ನು ವಜಾ ಮಾಡಿದೆ ಎಂದು ಕಿಡಿಕಾರಿದರು.

ಅರೆಸೇನಾ ಪಡೆ ಯೋಧರ ಹೋರಾಟದ ಫಲ ಗೃಹ ಸಚಿವಾಲಯ 2012ರ ಜನವರಿ 23ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅರೆಸೇನಾ ಪಡೆಯ ಮಾಜಿ ಯೋಧರಿಗೆ ಮಿಸಲಾತಿ ನೀಡುವಂತೆ ಆದೇಶ ನೀಡಿದೆ. ಹರಿಯಾಣ, ಗೋವಾ ಮತ್ತು ತಮಿಳುನಾಡು ಸೇರಿದಂತೆ 7 ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದರೂ ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ನಿವೃತ್ತ ಯೋಧರಾದ ಕೃಷ್ಣಪ್ಪ, ಚಲುವರಾಜು, ನಾರಾಯಣಪ್ಪ, ಚಂದ್ರಶೇಖರ್ ಮತ್ತಿತರರು ಇದ್ದರು.

ಕೋಟ್ ...................

ವಸತಿ, ನಿವೇಶನ ಮತ್ತು ಜಮೀನು ಮಂಜೂರಾತಿಗಾಗಿ ಅನೇಕ ಮಾಜಿ ಯೋಧರು ಅರ್ಜಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಸ್ಪಂದನೆ ದೊರೆತಿಲ್ಲ. ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡದೆ ನಮ್ಮ ಮನವಿಗಳನ್ನು ಕಡೆಗಣಿಸಲಾಗಿದೆ.

-ಕೃಷ್ಣಪ್ಪ, ನಿವೃತ್ತ ಯೋಧರು

ಕೋಟ್ ................

2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯನ್ನು ಜಾರಿಗೆ ತಂದಿದ್ದರು. ಅವರದೇ ಸರ್ಕಾರ ಆ ಹೆಸರನ್ನು ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಎಂದು ಬದಲಾಯಿಸಿತು. ಆನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆ ಇಲಾಖೆಯನ್ನೇ ವಜಾಗೊಳಿಸಿತು. ಕೇಂದ್ರದಿಂದ ಕೆಲವು ಸುತ್ತೋಲೆಗಳು ಬಂದಿದ್ದರೂ ರಾಜ್ಯ ಸರ್ಕಾರ ಅವನ್ನು ಅನುಷ್ಠಾನಕ್ಕೆ ತಂದಿಲ್ಲ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಈಗಲಾದರೂ ಗಮನಹರಿಸಬೇಕು.

- ರಮೇಶ್, ನಿವೃತ್ತ ಯೋಧರು, ಹಾಸನ

ಬಾಕ್ಸ್‌..............

ಬೇಡಿಕೆಗಳು ಏನೇನು?

1.ಸೇನೆಗೆ ಸಿಗುವ ಮೂಲಸೌಲಭ್ಯಗಳು ಅರೆ ಸೇನಾ ಪಡೆಗಳಿಗೂ ದೊರೆಯಬೇಕು.

2.ಅರೆ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮರಣ ಹೊಂದಿದ ಯೋಧರಿಗೆ ಹುತಾತ್ಮರ ದರ್ಜೆ ನೀಡಬೇಕು.

3.ಅರೆ ಸೇನಾ ಪಡೆಗೂ ಸೇನಾ ಪಡೆಯ ರೀತಿಯಲ್ಲಿ ಸೈನಿಕ್ ಬೋರ್ಡ್ ಸ್ಥಾಪನೆ ಮಾಡುವುದು.

4.ಅರೆಸೇನಾ ಪಡೆಗಳ ಮಾಜಿ ಯೋಧರ ಮಕ್ಕಳಿಗೆ ರಾಜ್ಯ ಸರ್ಕಾರದಲ್ಲಿ ನೌಕರಿ ಮೀಸಲಾತಿ ನೀಡಬೇಕು.

5.ಪ್ರತಿ ಜಿಲ್ಲಾ ಮಟ್ಟದಲ್ಲಿ ಸಿಜಿಎಚ್ ಎಸ್ ಮತ್ತು ಸಿಪಿಸಿ ಸ್ಥಾಪಿಸಬೇಕು. ಸಿಪಿಸಿ ಕ್ಯಾಂಟೀನ್‌ಗಳಿಗೂ ಶೇ. 50ರಷ್ಟು ಜಿಎಸ್‌ಟಿ ವಿನಾಯಿತಿ ನೀಡಬೇಕು.

6.ಪ್ರತಿ ಜಿಲ್ಲಾ ಮಟ್ಟದಲ್ಲಿ ಅರೆಸೇನಾಪಡೆಯ ಕಚೇರಿಗೆ ಜಾಗ ಮಂಜೂರಾತಿ ಮಾಡಬೇಕು.

7.ಸರ್ಕಾರದ ಆದೇಶದಂತೆ ಅರೆಸೇನಾ ಪಡೆಯ ಯೋಧರಿಗೆ ಭೂಮಿ ಮಂಜೂರಾತಿ ಮಾಡುವುದು.

8.ಅರೆಸೇನಾ ಪಡೆಯ ಮಾಜಿ ಯೋಧರು ಮರಣ ಹೊಂದಿದರೆ ಸ್ಥಳೀಯ ಪೊಲೀಸರಿಂದ ಅಂತಿಮ ಗೌರವ ನಮನ ಸಲ್ಲಿಸಬೇಕು.

9.ಮಾಜಿ ಯೋಧರು ಜಮೀನು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸುಮಾರು 20 - 25 ವರ್ಷಗಳಾಗಿದೆ. ಈ ಕೂಡಲೇ ಜಮೀನು ಮಂಜೂರಾತಿ ಮಾಡಬೇಕು.

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಎಕ್ಸ್ ಪ್ಯಾರಾಮಿಲಿಟರಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ರಾಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.