ಹೊಸಕೋಟೆ: ತಾಲೂಕಿನಲ್ಲಿ ಸಿಎಸ್‌ಆರ್ ಅನುದಾನದಡಿ ಸರಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ನಂದಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಆವರಣದಲ್ಲಿ ಯುಐ ಪಥ್ ಮತ್ತು ಯುನೈಟೆಡ್ ವೇ ಕಂಪನಿಯ ಸಿಎಸ್‌ಆರ್ ಅನುದಾನದಡಿ 65 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ೪ ಕೊಠಡಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು,

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಗ್ರಾಮೀಣ ಬಡಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವುದರಿಂದ ಅವರ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಸಕಲ ಸೌಲಭ್ಯಗಳನ್ನು ಒದಗಿಸುತ್ತಿವೆ. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಾಲಾಭಿವೃದ್ಧಿ ಸಮಿತಿಗಳು ಮತ್ತು ಶಿಕ್ಷಕರ ಸಮನ್ವಯತೆಯಿಂದ ಶಾಲೆಗಳು ಪ್ರಗತಿ ಕಾಣಲು ಸಾಧ್ಯ. ಸತತ 15 ವರ್ಷದಿಂದ ಯುನೈಟೆಡ್ ವೇ ಕಾರ್ಪೋರೇಟ್ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಬಿಇಒ ಪದ್ಮನಾಭ್ ಮಾತನಾಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ರಾಜಶೇಖರ್, ಬಮುಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೆ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಯದ್ರೆಗೌಡ, ಉದ್ಯಮಿ ಕಲ್ಕೆರೆ ಎಂ.ಮಂದೀಪ್‌ಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ನಿರ್ದೇಶಕರಾದ ಎಚ್.ಎನ್.ಧರ್ಮೇಶ್, ಚಂದ್ರಪ್ಪ, ಎಂ.ನಾಗೇಶ್, ಸಿ.ಎನ್. ದಿನೇಶ್, ಎನ್.ಶ್ರೀನಿವಾಸ್, ಎಸ್‌ಡಿಎಂಸಿ ಉಪಾಧ್ಯಕ್ಷ ಎನ್.ಗಂಗಾಧರ್, ಸದಸ್ಯ ಜಿ.ಮೂರ್ತಿ, ಭೂನ್ಯಾಯ ಮಂಡಳಿ ಸದಸ್ಯ ವೀರರಾಜು, ಯುನೈಟೆಡ್ ವೇ ಕಂಪನಿ ನಾಗರಾಜ್, ಎ೨ ಕಂಪನಿಯ ಕೆ.ಮಂಜುನಾಥ್, ಮುಖಂಡರಾದ ಚೊಕ್ಕಸಂದ್ರ ದೇವರಾಜ್, ಲಕ್ಷ್ಮೀನಾರಾಯಣ್, ಎನ್.ನಾಗೇಶ್, ನಟರಾಜ್, ಪಿಡಿಒ ಕೆಂಪಣ್ಣ, ಮುಖ್ಯಶಿಕ್ಷಕ ಡಿ.ಕೆ.ಕೃಷ್ಣಪ್ಪ, ಶಿಕ್ಷಕರು ಇತರರಿದ್ದರು.


ಫೋಟೋ: 12 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ನಂದಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ 4 ನೂತನ ಕೊಠಡಿಗಳನ್ನು ಶಾಸಕ ಶರತ್ ಬಚ್ಚೇಗೌಡ ಲೋಕಾರ್ಪಣೆ ಮಾಡಿದರು. ಬಿಇಒ ಪದ್ಮನಾಭ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಇತರರಿದ್ದರು.