ರಾಮನಗರ: ವಿಶೇಷಚೇತನರು ಗೌರವಯುತ ಜೀವನ ನಡೆಸಲು, ಸಮಾಜ ಅವರನ್ನು ಸಮಾನರನ್ನಾಗಿ ಕಾಣಲು, ಸರ್ಕಾರ ವಿಕಲಚೇತನರಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ರಾಮನಗರ: ವಿಶೇಷಚೇತನರು ಗೌರವಯುತ ಜೀವನ ನಡೆಸಲು, ಸಮಾಜ ಅವರನ್ನು ಸಮಾನರನ್ನಾಗಿ ಕಾಣಲು, ಸರ್ಕಾರ ವಿಕಲಚೇತನರಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆಯ ಕಾರ್ಯಕ್ರಮಗಳು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿವಿಧ ಇಲಾಖೆಗಳು, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಬಳಸಲು ಮೀಸಲಿರಿಸಲಾಗಿದೆ. ಅದರಂತೆ ಮೀಸಲಿರಿಸಿದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಲು ಕ್ರಮ ವಹಿಸಲಾಗಿದೆ. ವಿಶೇಷಚೇತನರು ಗೌರವಯುತವಾಗಿ ಬದುಕಲು ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸಮಾನತೆ ತರಲು ಅವರಿಗೆ ವಿದ್ಯಾರ್ಥಿವೇತನ, ಪಿಂಚಣಿ, ಉದ್ಯೋಗ ಮೀಸಲಾತಿ, ಯಂತ್ರೋಪಕರಣಗಳ ಸೌಲಭ್ಯ, ತ್ರಿಚಕ್ರವಾಹನ, ಶ್ರವಣ ಸಾಧನ, ಕ್ಲಚರ್, ವಾಕಿಂಗ್‌ಸ್ಟಿಕ್, ವ್ಹೀಲ್ ಚೇರ್ ಸಾಧನ ಸಲಕರಣೆಗಳ ಸೌಲಭ್ಯ ವಿತರಣೆ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿ, ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 20,000ಕ್ಕೂ ಹೆಚ್ಚು ವಿಶೇಷ ಚೇತನರಿದ್ದು ಅದರಲ್ಲಿ 16,000ಕ್ಕೂ ಹೆಚ್ಚು ಮಂದಿಗೆ ಈಗಾಗಲೇ ಅಂಗವಿಕಲರ ಗುರುತಿನ ಚೀಟಿ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿಶೇಷಚೇತನ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ವಿಶೇಷಚೇತನರ ಕುಂದು ಕೊರತೆ ಆಲಿಸಿದ ಶಾಸಕರು ಎಲ್ಲ ಸರ್ಕಾರಿ ಕಟ್ಟಡ, ಗ್ರಾಪಂ ಕಚೇರಿಗಳಲ್ಲಿ ಅಡೆ-ತಡೆ ರಹಿತ ರ‍್ಯಾಂಪ್, ವಿಕಲಚೇತನಸ್ನೇಹಿ ಶೌಚಾಲಯಗಳ ನಿಮಾರ್ಣಕ್ಕೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ 8ರಿಂದ10 ವ್ಹೀಲ್‌ಚೇರ್‌ಗಳನ್ನು ಒದಗಿಸಲು ಒಂದು ವಾರದೊಳಗೆ ಕ್ರಮ ವಹಿಸಲಾಗುವುದು. ವಿಕಲಚೇತನರ ಪ್ರತ್ಯೇಕ ಸಚಿವಾಲಯ ಹಾಗೂ ಎಂಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂಗಳ ಖಾಯಂ ನೇಮಕಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ರಾಜು ಮಾತನಾಡಿ, ವಿಕಲಚೇತನರ ಜೀವನಮಟ್ಟ ಸುಧಾರಿಸಲು ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರಲು ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸಿ ಅನೇಕ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದೆ. ವಿಶೇಷಚೇತನರು ಸರ್ಕಾರಿ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ 2024 - 25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಕಲಚೇತನರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ಕಸಬಾ ಮತ್ತು ಕೈಲಾಂಚ ಹೋಬಳಿಯ ಅರ್ಹ ವಿಶೇಷಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ರಾಮನಗರ ನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ದಿನೇಶ್ ಜೆ.ಆರ್, ಜಿಲ್ಲಾ ಅಂಗವಿಕಲ ಇಲಾಖೆಯ ಕಲ್ಯಾಣಾಧಿಕಾರಿ ಜ್ಯೋತಿ ಉಪಸ್ಥಿತರಿದ್ದರು.3ಕೆಆರ್ ಎಂಎನ್ 1,2.ಜೆಪಿಜಿ
1.ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.2.ರಾಮನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದರು.