ಸಾರಾಂಶ
ಹಾನಗಲ್ಲ ತಾಲೂಕಿನ ಬೆಳಗಾಲಪೇಟೆ ಮತ್ತು ಹಿರೇಹುಲ್ಲಾಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ ಹಾಗೂ ಮಕರವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ತಾಲೂಕಿನ ಬೆಳಗಾಲಪೇಟೆ ಮತ್ತು ಹಿರೇಹುಲ್ಲಾಳ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಲ್ಯಾಬ್ ಹಾಗೂ ಮಕರವಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಸೋಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ ಅನುದಾನದಲ್ಲಿ ₹೨೪ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಎರಡು ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಅವಶ್ಯ ಮೂಲಭೂತ ಸೌಲಭ್ಯಗಳನ್ನು ಹೊಂದುವ ವರೆಗೆ ಶಾಲು, ಮಾಲೆ, ಸನ್ಮಾನ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ. ಸನ್ಮಾನಕ್ಕೆ ಅನವಶ್ಯಕವಾಗಿ ಹಣ ವ್ಯಯ ಮಾಡುವುದನ್ನು ನಿಲ್ಲಿಸಿ, ಆ ಹಣವನ್ನೇ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಬಳಸಿದರೆ ಅನುಕೂಲವಾಗಲಿದೆ. ಸರ್ಕಾರದ ಅನುದಾನಕ್ಕೆ ಕಾಯದೇ ಇದುವರೆಗೂ ತಾಲೂಕಿನಲ್ಲಿ ೯೦ ಶಾಲೆಗಳಿಗೆ ಒಂದೂವರೆ ಕೋಟಿ ರು. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಹಣದಲ್ಲಿ ಅರ್ಧ ಗ್ರಾಮಸ್ಥರು ಸಂಗ್ರಹಿಸಿ ನೀಡಿದರೆ, ಉಳಿದರ್ಧ ಹಣವನ್ನು ವೈಯಕ್ತಿಕವಾಗಿ ಭರಿಸಿದ್ದೇನೆ ಎಂದರು.ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆ ತರುವ ಹೊಸದೊಂದು ಪ್ರಯೋಗ ನಮ್ಮ ತಾಲೂಕಿನಿಂದ ಯಶಸ್ವಿಯಾಗಿದೆ. ಅದೇ ಈಗ ಹಳೆ ಬೇರು, ಹೊಸ ಚಿಗುರು ಕಾರ್ಯಕ್ರಮವಾಗಿ ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ಬಂದಿದೆ ಎಂದು ಹೇಳಿದರು.
ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಸಮುದಾಯದ ಸಹಭಾಗಿತ್ವ ಇದ್ದರೆ ಶೈಕ್ಷಣಿಕ ಕ್ಷೇತ್ರ ಸುಧಾರಣೆ ಕಾಣಲಿದೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಲು ಹಳೆಯ ವಿದ್ಯಾರ್ಥಿಗಳೂ ಮುಂದೆ ಬರಬೇಕಿದೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ ಅವರು, ಶಾಸಕ ಶ್ರೀನಿವಾಸ ಮಾನೆ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಸುಧಾರಣೆ ತರಲಾಗುತ್ತಿದೆ. ನಮ್ಮ ಮಕ್ಕಳನ್ನು ತರಬೇತಿಗೊಳಿಸಿ, ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಅಜ್ಜಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾಯಕ್ಕನವರ, ಉಪಾಧ್ಯಕ್ಷೆ ನಾಗವ್ವ ಕತ್ತಿ, ಸದಸ್ಯ ದಾವಲಸಾಬ ನಾಗನೂರ, ನಿವೃತ್ತ ಪ್ರಾಚಾರ್ಯ ಸಿ.ಎಸ್. ಬಡಿಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಇದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.