ಹಿರೇವಂಕಲಕುಂಟಾದಲ್ಲಿ ೧೧೦ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ

ಯಲಬುರ್ಗಾ: ತಾಲೂಕಿನ ಮಂಡಲಮರಿ ಕ್ರಾಸ್‌ನಲ್ಲಿ ೧೧೦ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ವಿಭಾಗಿಯ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಪ್ರಾರಂಭಿಸಲಾಗುವುದು ಎಂದು ಜೆಸ್ಕಾಂ ಎಇಇ ಮಹಮದ್ ಖಲಿಮುದ್ದೀನ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಜೆಸ್ಕಾಂ ಉಪ-ವಿಭಾಗದ ಸಲಹಾ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿದರು.

ಹಿರೇವಂಕಲಕುಂಟಾದಲ್ಲಿ ೧೧೦ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ನಾಲ್ಕು ಬಾರಿ ಟೆಂಡರ್ ಕರೆಯಲಾಗಿದೆ. ಟೆಂಡರನಲ್ಲಿ ಯಾರೂ ಭಾಗವಹಿಸದ ಕಾರಣ ಕಾಮಗಾರಿ ವಿಳಂಬವಾಗಿದೆ. ಈಗಾಗಲೇ ಆಂಧ್ರಪ್ರದೇಶ ಗುತ್ತಿಗೆದಾರರಿಗೆ ವಹಿಸಿ ಕೊಡಲಾಗಿದೆ. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಹಿರೇಮ್ಯಾಗೇರಿಯಲ್ಲಿ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಗ್ರಾಮದಲ್ಲಿ ಹಳೆಯ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅವುಗಳನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸಬೇಕು. ವಿದ್ಯುತ್ ವೋಲ್ಟೇಜ್ ಇಲ್ಲದ ಕಾರಣ ರೈತರ ಪಂಪಸೆಟ್‌‌ ಚಾಲನೆಯಾಗುತ್ತಿಲ್ಲ. ಆದ್ದರಿಂದ ರೈತರಿಗೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ರೈತರು ಕಡ್ಡಾಯವಾಗಿ ಆರ್‌ಆರ್ ನಂಬರ್ ಪಡೆದುಕೊಂಡು ಹೊಸ ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಮುರಡಿ ಹೈಸ್ಕೂಲ್‌ಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸಮಸ್ಯೆಯಾಗಿದೆ. ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಲಹಾ ಸಮಿತಿ ಸದಸ್ಯ ಬಾಳಪ್ಪ ಬಂಡಾರಿ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಎಇಇ ಪ್ರತಿಕ್ರಿಯಿಸಿ, ಶಾಲೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ನಮ್ಮ ಬಳಿ ಅನುದಾನ ಲಭ್ಯವಿಲ್ಲ.ಶಾಲೆಯವರೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಎಂದರು.

ಸಲಹಾ ಸಮಿತಿ ಸದಸ್ಯ ಯಮನೂರಪ್ಪ ತಳವಾರ ಮಾತನಾಡಿ, ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯ ಬೀದಿ ದೀಪಗಳು ಹಗಲಿನಲ್ಲಿ ಉರಿಯುತ್ತಿವೆ.ಗ್ರಾಪಂ ಪಿಡಿಒಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು.

ವಿದ್ಯುತ್ ಗ್ರಾಹಕರ ಸಲಹಾ ಸಮಿತಿ ಸದಸ್ಯ ಹುಸೇನ್‌ಸಾಬ್ ಹಾಳಕೇರಿ, ಭೀಮಪ್ಪ ದಮ್ಮೂರು, ಹಿರೇಹನುಮಂತಪ್ಪ ಬೊಮ್ಮನಾಳ, ಸಣ್ಣಬಾಳಪ್ಪ ಬಂಡಾರಿ, ಕಾಸಿನಾಥ ಗಾಂಜಿ, ಈರಪ್ಪ ರಾಠೋಡ, ಶಂಕರಗೌಡ ಮಾಲಿಪಾಟೀಲ್, ಮಹಾಂತೇಶ ಬೆಲ್ಲದ, ಬಾಳಪ್ಪ ಹುಣಸಿಗಿಡ, ಶಿವಕುಮಾರ ಬನ್ನಿಗೋಳ, ಮಂಜುನಾಥ ಸಾಲಿಮಠ, ಸೋಮಶೇಖರ ಆರ್., ರವಿ ಟೆಂಗಿನಕಾಯಿ ಸೇರಿದಂತೆ ಮತ್ತಿತರರು ಇದ್ದರು.