ಜನರಿಗೆ ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಮೃತ ನಗರೋತ್ಥಾನ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ಹೊಸಪೇಟೆ: 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಜಲಸಂಗ್ರಹಗಾರಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಜನರಿಗೆ ಸಮರ್ಪಕ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಮೃತ ನಗರೋತ್ಥಾನ ಯೋಜನೆ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ಎಂ.ಜೆ. ನಗರ ಮತ್ತು ಎಂ.ಪಿ. ಪ್ರಕಾಶ್ ನಗರದಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್‌ಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಒಟ್ಟು ₹4.9 ಕೋಟಿ ವೆಚ್ಚದಲ್ಲಿ ಈ ಎರಡು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಇರುವ 38 ಎಂಎಲ್‌ಡಿ ನೀರು ಸರಬರಾಜನ್ನು ಹೊಸ ಯೋಜನೆಯ ಮೂಲಕ 108–110 ಎಂಎಲ್‌ಡಿಗೆ ಹೆಚ್ಚಿಸಲಾಗುವುದು. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಸುಮಾರು 7 ರಿಂದ 8 ಲಕ್ಷ ಜನರಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದರು.

ನಗರದ ಜೋಳದರಾಶಿ ಗುಡ್ಡ, ಕಾರಿಗನೂರು ಬಳಿ ಪ್ರಮುಖ ಟ್ಯಾಂಕ್‌ಗಳ ನಿರ್ಮಾಣ ಹಾಗೂ ಹೊಸ ಪಂಪಿಂಗ್ ಸ್ಟೇಷನ್ ಮತ್ತು ನೀರು ಸಂಸ್ಕರಣಾ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎನ್. ರೂಪೇಶ್‌ ಕುಮಾರ, ಸದಸ್ಯೆ ವಿ. ಕನಕಮ್ಮ, ಸದಸ್ಯ ರಮೇಶ ಗುಪ್ತಾ, ಪೌರಾಯುಕ್ತ ಶಿವಕುಮಾರ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ನಾಗರಾಜ ಮತ್ತಿತರರಿದ್ದರು.ಹಂಪಿ ಉತ್ಸವ ವೇಳೆ ಜಿಲ್ಲಾಸ್ಪತ್ರೆ ಲೋಕಾರ್ಪಣೆ

ಹೊಸಪೇಟೆ:

ಜಿಲ್ಲಾಸ್ಪತ್ರೆ ಕಟ್ಟಡವನ್ನು 400 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈಗಾಗಲೇ 200ಕ್ಕೂ ಹೆಚ್ಚು ಬೆಡ್‌ಗಳ ಆಸ್ಪತ್ರೆ ನಿರ್ಮಾಣಗೊಂಡಿದೆ. ಹಾಗಾಗಿ ಆಸ್ಪತ್ರೆ ಉದ್ಘಾಟನೆಯನ್ನು ಹಂಪಿ ಉತ್ಸವದ ವೇಳೆ ನಡೆಸಲಾಗುವುದು ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ಹೇಳಿದರು.

ಈ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಸ್ತೇಶಿಯಾ ವೈದ್ಯರು, ಪರಿಣತ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ನೇಮಕ ಆಗಬೇಕಿದೆ. ನಾವು ಈಗ ಬೇಸಿಕ್‌ ಆಗಿ ಆಸ್ಪತ್ರೆ ಆರಂಭಿಸಲು ಪ್ಲಾನ್‌ ಮಾಡಿದ್ದೇವೆ. ಈಗಾಗಲೇ ಆರೋಗ್ಯ ಇಲಾಖೆ ಜೊತೆಗೂ ಚರ್ಚಿಸಿದ್ದು, ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.