ಸಾರಾಂಶ
ಲೋಕಸರ ನಾಲೆ ಅಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನಾನು ಈ ಭಾಗದ ರೈತರಿಗೆ 2 ತಿಂಗಳ ನಂತರ ಕೃಷಿ ಚಟುವಟಿಕೆಯನ್ನು ಆರಂಭಿಸಲು ಮನವಿ ಮಾಡಿದ್ದೆ, ಅದರೂ ರೈತರು ಕೃಷಿ ಚಟುವಟಿಕೆ ಆರಂಭಿಸಿ ನೀರಿಲ್ಲದೆ ಬೆಳೆಗಳನ್ನು ಒಣಗಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 15 ರಿಂದ 20 ದಿನಗಳ ಕಾಲ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಲೋಕಸರ ನಾಲಾ ವ್ಯಾಪ್ತಿಯ ಅಚ್ಚುಕಟ್ಟು ರೈತರ ಬೆಳಗಳಿಗೆ ಸಮರ್ಪಕ ನೀರು ಹರಿಸಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಸಮೀಪದ ಕೆ.ಶೆಟ್ಟಹಳ್ಳಿ, ಮಾದರಹಳ್ಳಿ ಮತ್ತು ಎರಡು ಮನೆದೊಡ್ಡಿ ಗ್ರಾಮಗಳ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳನ್ನು ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಾಲೆಗಳ ಆಧುನೀಕರಣದಿಂದ ಬೆಳೆಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ರೈತರು ನನ್ನ ಗಮನಕ್ಕೆ ತಂದ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡುವಂತೆ ಸೂಚಿಸಿದ್ದೇನೆ ಎಂದರು.ಸರ್ಕಾರದಿಂದ ಕೋಟಿಗಟ್ಟಲೇ ಅನುದಾನ ತಂದು ಕ್ಷೇತ್ರದ ಕೊನೆ ಭಾಗದ ರೈತರಿಗೆ ಸಮಪರ್ಕವಾಗಿ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಲೋಕಸರ ನಾಲೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದು, ಕಾಮಗಾರಿಗೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಮುಕ್ತವಾಗಿ ಜಲ ವಿತರಣೆಯಾಗಿ ಕೃಷಿಗೆ ಸುಧಾರಿತ ಬೆಂಬಲ ಲಭಿಸಲಿದೆ. ಜಲಾನಯನ ವ್ಯವಸ್ಥೆ ಸುಧಾರಿತವಾಗುವ ಮೂಲಕ ರೈತರ ಬೆಳೆಗಳ ರಕ್ಷಣೆ ಹಾಗೂ ಉತ್ಪಾದಕತೆ ಹೆಚ್ಚಳವಾಗಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದರು.ಲೋಕಸರ ನಾಲೆ ಅಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನಾನು ಈ ಭಾಗದ ರೈತರಿಗೆ 2 ತಿಂಗಳ ನಂತರ ಕೃಷಿ ಚಟುವಟಿಕೆಯನ್ನು ಆರಂಭಿಸಲು ಮನವಿ ಮಾಡಿದ್ದೆ, ಅದರೂ ರೈತರು ಕೃಷಿ ಚಟುವಟಿಕೆ ಆರಂಭಿಸಿ ನೀರಿಲ್ಲದೆ ಬೆಳೆಗಳನ್ನು ಒಣಗಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 15 ರಿಂದ 20 ದಿನಗಳ ಕಾಲ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ನಿಗಮದ ಮುಖ್ಯ ಇಂಜಿನಿಯರ್ ನಂಜುಂಡೇಗೌಡ, ಎಇಇ ರಾಜೇಶ್, ಎಇ ನವೀನ್, ಮುಖಂಡರಾದ ಕೆ. ಶೆಟ್ಟಹಳ್ಳಿ ರಘು, ಸಿದ್ದೇಗೌಡ, ಗಿರೀಶ್, ರುದ್ರಯ್ಯ, ಸಿದ್ದೇಗೌಡ, ಎಸ್.ಬಿ ತಮ್ಮೆಗೌಡ, ಹನುಮಯ್ಯ, ಪುಟ್ಟಯ್ಯ ಸೇರಿ ಹಲವರು ಉಪಸ್ಥಿತರಿದ್ದರು.