ಸಾರಾಂಶ
ರಾಣಿಬೆನ್ನೂರು: ನಮ್ಮ ಹಿರಿಯರ ತ್ಯಾಗ, ಬಲಿದಾನ ಹಾಗೂ ಸಮಾಜದಲ್ಲಿನ ಎಲ್ಲರೂ ಒಂದೇ ಎಂಬ ಮನೋಭಾವದಿಂದ ನಡೆಸಿದ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ತಾಲೂಕು ಆಡಳಿತದ ವತಿಯಿಂದ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶ ವಿಶ್ವಗುರುವಾಗಿದೆ ಎಂದು ಭಾಷಣ ಮಾಡಿದರೆ ಬಡತನ ಹೋಗುವುದಿಲ್ಲ. ಅದು ನಿರ್ಮೂಲವಾಗಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಆ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ರಾಣಿಬೆನ್ನೂರು ತಾಲೂಕನ್ನು ಪ್ರವಾಸಿ ತಾಣವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.ಕೃಷ್ಣಮೃಗ ಅಭಯಾರಣ್ಯ ವೀಕ್ಷಣೆಗೆ ಸಫಾರಿ ವಾಹನ, ದೊಡ್ಡಕೆರೆಯಲ್ಲಿ ಬೋಟಿಂಗ್‌ಗಾಗಿ ಬೋಟ್, ಅರೇಮಲ್ಲಾಪುರ ಬಳಿಯ ಬೆಟ್ಟದ ಮಲ್ಲಪ್ಪ ಕ್ಷೇತ್ರಕ್ಕೆ ಹೋಗಿ ಬರಲು ಜೀಪ್ ವ್ಯವಸ್ಥೆಯನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದೆ. ಇದಲ್ಲದೆ ನಮ್ಮ ಮಕ್ಕಳು, ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಪರಿಕಲ್ಪನೆಯಿಂದ 1971ರ ಪಾಕಿಸ್ತಾನ ಯುದ್ಧದಲ್ಲಿ ಕಾರ್ಯನಿರ್ವಹಿಸಿದ ಶಿವಶಕ್ತಿ ಟ್ಯಾಂಕರ್ ಕೂಡ ಪ್ರತಿಷ್ಠಾಪಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ ಮಾತನಾಡಿ, ನಮ್ಮ ಇಂದಿನ ಯುವಪೀಳಿಗೆಗೆ ನಮ್ಮ ಸ್ವಾತಂತ್ರ‍್ಯ ಹೇಗೆ ದೊರಕಿತು ಎಂದು ಅರ್ಥ ಮಾಡಿಸುವ ದಿನ ಇದಾಗಿದೆ. ಅಪಾರ ಬೆಲೆ ತೆತ್ತು ಗಳಿಸಿರುವ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶೇರುಖಾನ ಕಾಬೂಲಿ, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕರೇಗೌಡ ಬಾಗೂರ, ಟಿಎಪಿಸಿಎಂಎಸ್ ಅಧ್ಯಕ್ಷ ಯಲ್ಲರೆಡ್ಡಿ ರಡ್ಡೇರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ, ಡಿವೈಎಸ್‌ಪಿ ಲೋಕೇಶ, ಬಿಇಒ ಶಾಮಸುಂದರ ಅಡಿಗ, ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ, ಸಿಡಿಪಿಒ ಪಾರ್ವತಿ ಹುಂಡೇಕಾರ, ಟಿಎಚ್‌ಒ ಡಾ. ರಾಜೇಶ್ವರಿ ಕದರಮಂಡಲಗಿ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಜು ಶಿರೂರ ಹಾಗೂ ನಗರಸಭಾ ಸದಸ್ಯರು ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಮಾಡಲಾದ ಲ್ಯಾಪ್‌ಟ್ಯಾಪ್‌ಗಳನ್ನು ಹಾಗೂ ಅಂಗವಿಕಲರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ 1971ರ ಪಾಕಿಸ್ತಾನ ಯುದ್ಧದಲ್ಲಿ ಕಾರ್ಯನಿರ್ವಹಿಸಿದ ಶಿವಶಕ್ತಿ ಟ್ಯಾಂಕರ್‌ಗೆ ಪಥಸಂಚಲನದ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಮತ್ತು ವಂದೇಮಾತರಂ ಗೀತೆಗಳನ್ನು ಹಾಡಿದರು.