ಸಾವಯವ ಕೃಷಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಕ್ರಮ

| Published : Mar 29 2025, 12:31 AM IST

ಸಾವಯವ ಕೃಷಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯಲ್ಲಿ ಅತೀ ಹೆಚ್ಚು ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ರಾಸಾಯನಿಕವಾಗಿ ಬೆಳೆದ ಕೃಷಿ ಪದಾರ್ಥ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಭೂಮಿಯ ಸಂರಕ್ಷಣೆ, ಜನರ ಆರೋಗ್ಯಕ್ಕಾಗಿ ಸಾವಯವ ಕೃಷಿಯು ಇಂದು ಅಗತ್ಯವಾಗಿದೆ.

ಕೊಪ್ಪಳ:

ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮುಂದೆ ಬರಬೇಕು. ಇದಕ್ಕಾಗಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು

ಜಿಲ್ಲಾಡಳಿತದ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾವಯವ ಮೇಳ ಹಾಗೂ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ಅತೀ ಹೆಚ್ಚು ರಾಸಾಯನಿಕ ಬಳಕೆಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತದೆ. ರಾಸಾಯನಿಕವಾಗಿ ಬೆಳೆದ ಕೃಷಿ ಪದಾರ್ಥ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಭೂಮಿಯ ಸಂರಕ್ಷಣೆ, ಜನರ ಆರೋಗ್ಯಕ್ಕಾಗಿ ಸಾವಯವ ಕೃಷಿಯು ಇಂದು ಅಗತ್ಯವಾಗಿದೆ ಎಂದ ಅವರು, ಗಂಗಾವತಿ, ಕಾರಟಗಿ, ಕನಕಗಿರಿ, ಕೊಪ್ಪಳ ತಾಲೂಕಿನ ಕೆಲ ಭಾಗ ಸೇರಿ ಜಿಲ್ಲೆಯಲ್ಲಿ 3 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಸಾವಯವ ಕೃಷಿಗೆ ಬೇಡಿಕೆಯಿದ್ದು, ರೈತರಿಗೆ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಸಾವಯವ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಸಾವಯವ ಪದಾರ್ಥಗಳಿಗೆ ಹೆಚ್ಚು ಬೇಡಿಕೆಯಿದ್ದು, ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಯನ್ನು ಒಂದು ಬ್ರ್ಯಾಂಡಿಂಗ್ ಮಾಡಿದರೇ ಒಳ್ಳೆಯ ಬೆಲೆ ಸಿಗಲಿದೆ. ಇದರಿಂದ ಗ್ರಾಹಕರಿಗೂ ಉತ್ತಮ ಆರೋಗ್ಯ ದೊರೆಯುತ್ತದೆ. ಜಿಲ್ಲೆಯಲ್ಲಿ ಸಮಗ್ರ ಸಾವಯಕ ಕೃಷಿ ಪದ್ಧತಿ ಜಾರಿಗೊಳಿಸಲು ಮುಂದಿನ ಐದು ವರ್ಷದಲ್ಲಿ ಏನು ಮಾಡಬಹುದು ಎಂಬುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ತೋಟಗಾರಿಕೆಗೂ ಉತ್ತಮ ಅವಕಾಶವಿದ್ದು, ರೈತರು ತಮ್ಮ ಜಮೀನಿನ ಶೇ. 40ರಷ್ಟು ಭಾಗದಲ್ಲಿ ತೋಟಗಾರಿಕೆ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಜಿಪಂ ಸಿಇಒ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಜಿಲ್ಲೆಯಲ್ಲಿ 2.80 ಲಕ್ಷ ರೈತರು, 4.30 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಿದೆ. ಇದರಲ್ಲಿ 4 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ 3 ಸಾವಿರ ರೈತರು ಮಾತ್ರ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿ ಹೆಚ್ಚಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಳವಂಡಿ ಭಾಗದ ರೈತರೊಬ್ಬರು 5ರಿಂದ 10 ಎಕರೆ ಜಮೀನಿನಲ್ಲಿ ಮೂರು ವರ್ಷದಿಂದ ಸಾವಯವ ಕೃಷಿ ಪದ್ಧತಿ ಕೈಗೊಂಡು ದಾಳಿಂಬೆ ಬೆಳೆದು ₹ 30ರಿಂದ ₹ 40 ಲಕ್ಷ ಲಾಭ ಪಡೆದಿದ್ದಾರೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಾಗಿದೆ. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಐಎಟಿ ರಾಜ್ಯ ಕಾರ್ಯದರ್ಶಿ ವಿ.ಕೆ. ಕಮತರ ಸಹ ಮಾತನಾಡಿದರು. ರಾಯಚೂರ ಕೃಷಿ ವಿಶ್ವವಿದ್ಯಾಲಯದ ಸಾವಯವ ವಿಭಾಗದ ಮುಖ್ಯಸ್ಥ ಡಾ. ಬಸವಣ್ಣೆಪ್ಪ ವಿಶೇಷ ಉಪನ್ಯಾಸ ನೀಡಿದರು.

ಸನ್ಮಾನ:

ರಾಜ್ಯಮಟ್ಟದಲ್ಲಿ ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಜಿಲ್ಲೆಯ ರೈತರಾದ ಬಸಯ್ಯ ಹಿರೇಮಠ, ವೆಂಕಟೇಶರಾವ್, ಶ್ರೀನಿವಾಸರಾವ್ ದೇಸಾಯಿ, ಅಜಯಕುಮಾರ್ ಪಾಟೀಲ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಣ್ಣ ಮೂಲಿಮನಿ, ರಾಯಚೂರಿನ ಕೃಷಿ ವಿವಿ ಬೋರ್ಡ್ ಸದಸ್ಯ ತಿಮ್ಮಣ್ಣ ಚೌಡಿ, ಕೃಷಿ ಇಲಾಖೆ ಉಪನಿರ್ದೇಶಕ ಎಲ್. ಸಿದ್ದೇಶ, ಕೃಷಿಕ ಸಮಾಜದ ಸದಸ್ಯ ಹಾಗೂ ಪ್ರಗತಿಪರ ರೈತ ವಿರೂಪಾಕ್ಷಪ್ಪ ನವೋದಯ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಾರಪ್ಪ, ಸಹಾಯಕ ಕೃಷಿ ನಿರ್ದೇಶಕಿ ಶಶಿಕಲಾ, ಶೇತ್ವಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.