ಶಿರಾಳಕೊಪ್ಪದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರಚಿಕಿತ್ಸೆ

| Published : Feb 17 2025, 12:33 AM IST

ಸಾರಾಂಶ

ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಗೊಳಿಸುವ ಉದ್ದೇಶದಿಂದ ಸರ್ಕಾರದ ಪ್ರಾಣಿ ಜನನ ನಿಯಂತ್ರಣ (ಅನಿಮಲ್‌ ಬರ್ತ್‌ ಕಂಟ್ರೋಲ್‌-ಎಬಿಸಿ) ಕಾಯ್ದೆ ಅನ್ವಯ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಯಿತು. ಶಿವಮೊಗ್ಗದ ಪಶುವೈದ್ಯಾಧಿಕಾರಿಗಳ ತಂಡದ ನೇತೃತ್ವದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸಹಾಯಕ ವೈದ್ಯರು ಸೇರಿ ಒಟ್ಟು 50ಕ್ಕೂ ಹೆಚ್ಚು ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದರು.

ಎಬಿಸಿ ಕಾಯ್ಎ ಅನ್ವಯ ಪುರಸಭೆ ವ್ಯಾಪ್ತಿಯಲ್ಲಿ ಶಿವಮೊಗ್ಗ ಪಶು ವೈದ್ಯಾಧಿಕಾರಿಗಳ ಕ್ರಮ । 50ಕ್ಕೂ ಹೆಚ್ಚು ನಾಯಿಗಳಿಗೆ ಆಪರೇಷನ್‌

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಗೊಳಿಸುವ ಉದ್ದೇಶದಿಂದ ಸರ್ಕಾರದ ಪ್ರಾಣಿ ಜನನ ನಿಯಂತ್ರಣ (ಅನಿಮಲ್‌ ಬರ್ತ್‌ ಕಂಟ್ರೋಲ್‌-ಎಬಿಸಿ) ಕಾಯ್ದೆ ಅನ್ವಯ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಯಿತು. ಶಿವಮೊಗ್ಗದ ಪಶುವೈದ್ಯಾಧಿಕಾರಿಗಳ ತಂಡದ ನೇತೃತ್ವದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಸಹಾಯಕ ವೈದ್ಯರು ಸೇರಿ ಒಟ್ಟು 50ಕ್ಕೂ ಹೆಚ್ಚು ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದರು.

ನಾಯಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಹಿಡಿದು, ಅವುಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಹೆಣ್ಣು ಹಾಗೂ ಗಂಡು ನಾಯಿಗಳನ್ನು ಪ್ರತ್ಯೇಕಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ, ನಾಯಿಗಳನ್ನು ವಿಶೇಷ ಬೋನಿನಲ್ಲಿ ಮೂರು ದಿನಗಳ ಕಾಲ ವೈದ್ಯಕೀಯ ಪೂರಕ ಚಿಕಿತ್ಸೆಗೆ ಒಳಪಡಿಸಲಾಗುವುದು. ಅವು ಸಂಪೂರ್ಣ ಗುಣಮುಖವಾದ ನಂತರ, ಸ್ವಾಭಾವಿಕ ಪರಿಸರಕ್ಕೆ ಮರಳಿಸಲಾಗುತ್ತದೆ.

ಸರ್ಕಾರದ ಪ್ರಾಣಿ ಜನನ ನಿಯಂತ್ರಣ ಯೋಜನೆ:

ಪ್ರಾಣಿ ಜನನ ನಿಯಂತ್ರಣ ಕಾಯ್ದೆಯ ಪ್ರಕಾರ, ಪ್ರತಿ ಸ್ಥಳೀಯ ಸಂಸ್ಥೆಗಳು ಬಜೆಟ್‌ನಲ್ಲಿ ಶೇ.2 ನಿಧಿಯನ್ನು ಈ ಕಾರ್ಯಕ್ಕಾಗಿ ಮೀಸಲಿಡುವುದು ಕಡ್ಡಾಯವಾಗಿದೆ. ಕೆಲವೊಂದು ನಾಯಿಗಳು ಮಾರಕ ರೋಗಗಳನ್ನು ಹರಡುವ ಸಾಧ್ಯತೆಯಿದೆ. ನಿಯಂತ್ರಣವಿಲ್ಲದೆ ಬೀದಿಯಲ್ಲಿ ತಿರುಗಾಡುವ ನಾಯಿಗಳು ಪರಿಸರ ಶುದ್ಧತೆಗೆ ಸಮಸ್ಯೆ ಉಂಟುಮಾಡಬಹುದು. ಅನೇಕ ನಾಯಿಗಳು ರಸ್ತೆಗಳಲ್ಲಿ ಓಡಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಶಸ್ತ್ರಚಿಕಿತ್ಸೆ ಪ್ರಾಣಿಗಳಿಗೆ ಹಾನಿಕಾರಕವಾಗದ ರೀತಿಯಲ್ಲಿ ಮಾಡಲಾಗಿದ್ದು, ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಗೊಳ್ಳುವುದರಿಂದ ಬೀದಿಯಲ್ಲಿ ಸಂಚರಿಸುವ ಜನರು, ವಿದ್ಯಾರ್ಥಿಗಳು, ಮಕ್ಕಳಿಗೆ ಸುರಕ್ಷಿತ ಪರಿಸರ ಒದಗಲು ಸಹಕಾರಿಯಾಗಲಿದೆ ಎಂದು ಪರಿಸರ ಅಭಿಯಂತರ ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಶು ಆಸ್ಪತ್ರೆ (ಪಾಲಿಕ್ಲಿನಿಕ್), ಉಪ ನಿರ್ದೇಶಕ ಡಾಕ್ಟರ್ ಬಸವೇಶ ಹೂಗಾರ್ ಮಾತನಾಡಿ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿರಾಳಕೊಪ್ಪ ಪುರಸಭೆಯ ಅಧ್ಯಕ್ಷರಾದ ಮಮತಾ ನಿಂಗಪ್ಪ,ಉಪಾಧ್ಯಕ್ಷ ಮುದಾಸಿರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ, ಇತರರು ಹಾಜರಿದ್ದರು.