ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ಕ್ಷೇತ್ರದ ಜನರ ಸೇವೆ ಮಾಡುವ ಮೂಲಕ ಅಭಿವೃದ್ಧಿಗೆ ಹೊಸ ವೇಗ ನೀಡಬೇಕು ಎಂಬ ತುಡಿತ ನನ್ನಲ್ಲಿದೆ ಎಂದರು.
ಅಂಕೋಲಾ: ಮಹಿಳೆಯರ ಪರವಾಗಿರುವ ಜನಪರ ಸರ್ಕಾರ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಮಹಿಳೆಯರಿಗೆ ಅರ್ಧಂಬರ್ಧ ಯೋಜನೆಗಳನ್ನು ನೀಡುವ ಮೂಲಕ ಅವರನ್ನು ಶೋಷಿಸುತ್ತಿದೆ. ಮಹಿಳೆಯನ್ನೇ ಬಳಸಿಕೊಂಡು ‘ಸ್ಟಿಂಗ್ ಆಪರೇಷನ್’ ನಡೆಸಿ ಅಧಿಕಾರದ ಹಪಾಹಪಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಜೆಡಿಎಸ್ ಕಾರ್ಯಾಲಯ ಉದ್ಘಾಟಿಸಿ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿಲ್ಲ. ತನ್ನ ಆಡಳಿತ ವೈಖರಿಯಿಂದಲೇ ಸರ್ಕಾರದ ಕಾರ್ಯವೈಖರಿ ಜನರಿಗೆ ಅರ್ಥವಾಗುತ್ತಿದೆ. ಈ ಹಿನ್ನೆಲೆ 2028ರಲ್ಲಿ ಎನ್ಡಿಎ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ಕ್ಷೇತ್ರದ ಜನರ ಸೇವೆ ಮಾಡುವ ಮೂಲಕ ಅಭಿವೃದ್ಧಿಗೆ ಹೊಸ ವೇಗ ನೀಡಬೇಕು ಎಂಬ ತುಡಿತ ನನ್ನಲ್ಲಿದೆ. ಇಲ್ಲಿನ ರೈತರು, ಮೀನುಗಾರರು, ಹಾಲಕ್ಕಿ ಸಮುದಾಯದವರು ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಮುಖ್ಯ ಆಶಯವಾಗಿದೆ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಹ್ನವಿ ಆರ್., ಜೆಡಿಎಸ್ ರಾಜ್ಯ ವಕ್ತಾರರಾದ ಪ್ರಶಾಂತಿ ಸುಭಾಷ ಮಾತನಾಡಿದರು. ಮೀನುಗಾರಿಕೆ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ರಾಷ್ಟ್ರೀಯ ಸಮಿತಿ ಸದಸ್ಯೆ ಕನ್ಯಾಕುಮಾರಿ, ರಾಜ್ಯ ವಕ್ತಾರೆ ಸುನಿತಾ ಲಡ್ಕರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೋಹಿನಿ ನಾಯ್ಕ, ಜಿಲ್ಲಾ ಸದಸ್ಯ ಮಂಗು ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಹಿರಿಯ ಸದಸ್ಯ ಆರ್.ಜಿ. ನಾಯ್ಕ, ಕಾರವಾರ ತಾಲೂಕಾಧ್ಯಕ್ಷ ಉದಯ ಕಳಸ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಆರ್ಯ ಹಾಗೂ ಶ್ರಾವಣಿ ಪ್ರಾರ್ಥಿಸಿದರು. ತಾಲೂಕಾಧ್ಯಕ್ಷ ಕರಿಯಾ ಗೌಡ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸಂದೀಪ ಬಂಟ ವಂದಿಸಿದರು. ಪತ್ರಕರ್ತ ಸುಭಾಷ ಕಾರೇಬೈಲ ಹಾಗೂ ಸೃಜನ್ ಕಾರ್ಯಕ್ರಮ ನಿರೂಪಿಸಿದರು.