ಶೇರು ವ್ಯವಹಾರ ನಷ್ಟ: ವ್ಯಕ್ತಿ ಆತ್ಮಹತ್ಯೆ ಯತ್ನ ವಿಫಲ

| Published : Jul 09 2024, 12:47 AM IST

ಸಾರಾಂಶ

ಶೇರು ವ್ಯವಹಾರದಲ್ಲಿನ ಸೋಲಿನಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ ಈತ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದ, ಸೋಮವಾರ ಮುಂಜಾನೆ 5ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಯಾವುದೋ ಆಯುಧನಿಂದ ತುಂಡರಿಸಿಕೊಂಡು ನದಿಗೆ ಹಾರಿದ್ದಾನೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಪುಳಿಕ್ಕುಕ್ಕು ಎಂಬಲ್ಲಿ ಕುಮಾರಧಾರ ನದಿಗೆ ಹಾರಿ ಪೊದೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಸೋಮವಾರ ನಡೆದಿದೆ.

ವ್ಯಕ್ತಿಯನ್ನು ಮೂಲತಃ ಆಂಧ್ರಪ್ರದೇಶದ ಮಡಕಸಿರ ನಿವಾಸಿ ರವಿ ಕುಮಾರ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಬೆಂಗಳೂರು ಮಾರ್ತಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ನಷ್ಟ ಉಂಟಾಗಿತ್ತು. ಹೀಗಾಗಿ ಸುಮಾರು ಎರಡು ಲಕ್ಷ ರು. ಸಾಲ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ.

ವ್ಯವಹಾರದಲ್ಲಿನ ಸೋಲಿನಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿದ ಈತ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮುಗಿಸಿ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿಗೆ ಬಂದಿದ್ದ, ಸೋಮವಾರ ಮುಂಜಾನೆ 5ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ತನ್ನ ಕೈಯನ್ನು ಯಾವುದೋ ಆಯುಧನಿಂದ ತುಂಡರಿಸಿಕೊಂಡು ನದಿಗೆ ಹಾರಿದ್ದಾನೆ.

ಈತ ನದಿಯಲ್ಲಿನ ಪೊದೆಯೊಂದರಲ್ಲಿ ಸಿಲುಕಿಕೊಂಡು ಅತ್ತ ಸಾಯಲೂ ಆಗದೆ ಇತ್ತ ದಡವನ್ನೂ ಸೇರಲೂ ಆಗದೆ ಒದ್ದಾಡಿದ . ಬಳಿಕ ರಕ್ಷಣೆಗಾಗಿ ಕೂಗಾಡಿದ್ದು ಕೂಗು ಕೇಳಿಸಿಕೊಂಡ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ , ಪೊಲೀಸರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

ಕೈಗೆ ಗಂಭೀರ ಸ್ವರೂಪದ ಗಾಯವಾದ ಕಾರಣ ಕಡಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.