ಕೋಣಂದೂರು ಬಳಿ ಶಿಲಾಸ್ಮಾರಕ ಪತ್ತೆ

| Published : Dec 15 2024, 02:00 AM IST

ಸಾರಾಂಶ

ಕೋಣಂದೂರಿನ ಬಳಿ ದೊರೆತಿರುವ ಶಿಲಾಸ್ಮಾರಕ

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ತಾಲೂಕಿನ ಕೋಣಂದೂರು ಪೇಟೆಯ ಬಸವನಬೀದಿ ಬಡಾವಣೆಗೆ ಹೋಗುವ ಮಾರ್ಗದ ಬದಿಯಲ್ಲಿ ಹಳೆಗನ್ನಡದ ಅಕ್ಷರಗಳು ಮತ್ತು ಮಹತ್ವದ ಸಂಕೇತಗಳಿರುವ ಹಿಂದಿನ ಕಾಲದ ಅಪರೂಪದ ಶಿಲಾಸ್ಮಾರಕವನ್ನು ಇತಿಹಾಸ ಸಂಶೋಧಕ ಎಲ್.ಎಸ್.ರಾಘವೇಂದ್ರ ಪತ್ತೆಮಾಡಿದ್ದಾರೆ.

ಇದೊಂದು ಅತ್ಯಂತ ಅಪರೂಪದ ಸ್ಮಾರಕವಾಗಿದ್ದು, ಹಿಂದಿನ ಕಾಲದಲ್ಲಿ ಗ್ರಾಮಸ್ಥರ ಮತ್ತು ಜಾನುವಾರುಗಳ ರಕ್ಷಣೆಗಾಗಿ ಊರಿನ ಗಡಿಗಳಲ್ಲಿ ಮಂತ್ರಿಸಿ ನಿಲ್ಲಿಸಲಾಗುತ್ತಿತ್ತು ಎಂಬ ಪ್ರತೀತಿ ಇದೆ. ಅತ್ಯಂತ ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿರುವ ಈ ಶಿಲಾಶಾಸನವನ್ನು ಸುರಕ್ಷಿತವಾದ ಸ್ಥಳದಲ್ಲಿ ರಕ್ಷಿಸುವ ಮೂಲಕ ಮುಂದಿನ ತಲೆಮಾರಿಗೆ ಅರಿಯುವಂತೆ ಕಾಪಾಡುವ ಅಗತ್ಯವಿದೆ ಎಂದು ಸಂಶೋಧಕ ಎಲ್.ಎಸ್.ರಾಘವೇಂದ್ರ ಹೇಳಿದ್ದಾರೆ.

ಗ್ರಾಮದಲ್ಲಿ ಜನರು ಮತ್ತು ಜಾನುವಾರುಗಳಿಗೆ ರೋಗ ರುಜಿನಗಳು ಭಾದಿಸದಂತೆ ಊರಿನ ಗಡಿಭಾಗಗಳಲ್ಲಿ ಧಾರ್ಮಿಕ ಭಾವನೆಯಿಂದ ಇಂತಹ ಕಲ್ಲುಗಳನ್ನು ಮಂತ್ರಿಸಿ ನಿಲ್ಲಿಸುವ ವಾಡಿಕೆ ಇತ್ತು ಎಂಬುದು ನಂಬಿಕೆಯಾಗಿದೆ. ಜನರು ಮತ್ತು ಜಾನುವಾರುಗಳು ರೋಗ ರುಜಿನಗಳಿಂದ ನರಳುತ್ತಿದ್ದಲ್ಲಿ ಈ ಕಲ್ಲನ್ನು ಪೂಜಿಸಿ ತೀರ್ಥ ಕುಡಿಸುತ್ತಿದ್ದರು ಮತ್ತು ಇದರಿಂದ ರೋಗ ಶಮನವಾಗುತ್ತಿತ್ತು ಎಂಬ ವ್ಯಾಪಕವಾದ ನಂಬಿಕೆಯೂ ಎಂಬ ಮಾತಿದೆ ಎಂದೂ ಸಂಶೋದಕರು ತಿಳಿಸಿದ್ದಾರೆ.