ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಮುಸ್ಲಿಂ ಮುಖಂಡ ಆದಿಲ್‌ಖಾನ್ ವಿರುದ್ಧ ಹಿಂದೂ ಮುಖಂಡರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿದ ಹಿಂದೂ ಮುಖಂಡರು, ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರರ ಸಭೆಯಲ್ಲಿ ಹೋರಾಟಕ್ಕೆ ತನು, ಮನ, ಧನ ಸಹಾಯ ಮಾಡುತ್ತೇನೆಂದು ಮುಸ್ಲಿಂ ಮುಖಂಡ ಆದಿಲ್ ಖಾನ್ ಹೇಳಿರುವುದನ್ನು ವಿರೋಧಿಸಿ ದೂರು ಸಲ್ಲಿಸಿದರು.
ಗಲಾಟೆ ಬಳಿಕ ತಮ್ಮ ಸಮುದಾಯವೇ ಗಲಭೆಗೆ ಕಾರಣವೆಂದು ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದರು. ಈಗ ಪ್ರಗತಿಪರರ ಜೊತೆ ಸೇರಿ ಉಲ್ಟಾ ಹೊಡೆದು ಪ್ರತಿಭಟನೆ ಮಾಡಿ ತಮ್ಮ ಸಮುದಾಯದಿಂದ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿರುವುದನ್ನು ಖಂಡಿಸಿದರು.ಮತೀಯ ಸಂಘರ್ಷಕ್ಕೆ ಕಾರಣವಾದ ಹೇಳಿಕೆ ಕೊಟ್ಟಿರುವ ಆದಿಲ್‌ಖಾನ್‌ನನ್ನು ಬಂಧಿಸುವಂತೆ ಆಗ್ರಹಿಸಿದರು. ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿದರು. ಹಿಂದೂ ರಕ್ಷಣಾ ಸಮಿತಿಯ ಅಭಿಷೇಕ್, ಸಿ.ಕೆ. ಸತೀಶ್, ವಕೀಲ ಮಲ್ಲೇಶ್, ಎಂ.ಸಿ.ಸಿದ್ದು, ನೈದಿಲೆ ಚಂದ್ರು, ಗೆಜ್ಜಲಗೆರೆ ಯೋಗೇಶ್, ಗೊರವನಹಳ್ಳಿ ಮಧು ಇತರರಿದ್ದರು.ಸಾಮರಸ್ಯ ನಡಿಗೆ ನಡೆದರೆ ಪ್ರತಿ ರ್ಯಾಲಿ: ಎಸ್.ಪಿ.ಸ್ವಾಮಿ
ಸಾಮರಸ್ಯ ನಡಿಗೆ ನಡೆಯಲು ಸೆ.೨೨ರಂದು ಪೊಲೀಸ್ ಇಲಾಖೆ ಅವಕಾಶ ನೀಡಿದರೆ ಅದಕ್ಕೆ ಪ್ರತಿಯಾಗಿ ನಾವೂ ಬೃಹತ್ ರ್ಯಾಲಿ ಆಯೋಜಿಸುವುದಾಗಿ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಎಚ್ಚರಿಕೆ ನೀಡಿದರು.ಅಂದು ನಡೆಯುವುದು ಸಾಮರಸ್ಯ ನಡಿಗೆಯಲ್ಲ. ಅದೊಂದು ಕೋಮಿನ ನಡಿಗೆ. ಅದರ ಸೂತ್ರಧಾರರು ಪ್ರಗತಿಪರರು ಎಂದು ಹೇಳಿಕೊಳ್ಳುವ ಮುಸ್ಲಿಂ ಓಲೈಕೆದಾರರು. ಮತ್ತೆ ಪ್ರಚೋದನೆ ನೀಡುವ ಪ್ರಯತ್ನವಿದು. ಮದ್ದೂರಿನಲ್ಲಿ ಶಾಂತ ಪರಿಸ್ಥಿತಿ ನೆಲೆಸಿದ್ದು, ಮತ್ತೊಮ್ಮೆ ಸಾಮರಸ್ಯ ನಡಿಗೆಗೆ ಅವಕಾಶ ನೀಡಿದರೆ ಪೊಲೀಸ್ ಇಲಾಖೆಯೇ ಹೊಣೆಯಾಗುತ್ತದೆ ಎಂದು ತಿಳಿಸಿದರು.
ಕಲ್ಲು ತೂರಾಟ: ಗಾಯಗೊಂಡವರಿಗೆ ಹಿಂದೂ ಕಾರ್ಯಕರ್ತರಿಂದ ಸಾಂತ್ವನಮದ್ದೂರು: ಪಟ್ಟಣದಲ್ಲಿ ಇತ್ತೀಚಿಗೆ ಗಣೇಶನ ವಿಸರ್ಜನೆ ವೇಳೆ ಕಲ್ಲು ತುರಾಟದಲ್ಲಿ ಗಾಯಗೊಂಡವರ ಮನೆಗೆ ವಿಶ್ವಹಿಂದ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ವಿಶ್ವ ಹಿಂದು ಪರಿಷತ್ತಿನ ಗೋವರ್ಧನ್ ಸಿಂಗ್, ಹಿಂದುಗಳ ಮೇಲೆ ಯಾರೇ ಹಲ್ಲೆ ಮಾಡಿದರು ಸಹಿಸುವ ಪ್ರಶ್ನೆಯೇ ಇಲ್ಲ. ಹಿಂದೂ ರಾಷ್ಟ್ರದಲ್ಲಿ ಹಿಂದುಗಳೇ ಸಾರ್ವಭೌಮತ್ವವನ್ನು ವಹಿಸಬೇಕು ಎಂದರು.ಕಲ್ಲು ತೂರಾಟದಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ರಾಜ್ಯವಾಪಿ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಸಂಬಂಧ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಮುಖಂಡರಾದ ರಾಘವೇಂದ್ರ, ಪುನೀತ್ ಕುಮಾರ್, ರವಿ, ಸಾಗರ್, ಗುರು ಮಲ್ಲೇಶ್, ಜಗನ್ನಾಥ್ ಸೇರಿದಂತೆ ಇತರರು ಹಾಜರಿದ್ದರು.