ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಗುರುವಾರ ರಾತ್ರಿ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಿದ ಪ್ರಮುಖ ಆರೋಪಿ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಗುರುವಾರ ರಾತ್ರಿ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಿದ ಪ್ರಮುಖ ಆರೋಪಿ ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದ ಹಿಂದೂ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿ ಪೊಲೀಸರು ಚದುರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.ಮಸೀದಿ ಮೇಲಿಂದ ಎರಡು ಕಲ್ಲು ತೂರಿದ ಆರೋಪದಲ್ಲಿ ಪ್ರಮುಖ ಆರೋಪಿ ತನ್ವೀರ್ ಹವಾಲ್ದಾರ (25), ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪೆಂಡಾರಗಲ್ಲಿಯ ಮಜ್ಜು ಕಮತಗಿ (23), ಸದ್ದಾಂ ಕಮತಗಿ (22), ಪಯಾಜ ಹಣಮಸಾಗರ (24), ಶಂಕರಲಿಂಗ ಗುಡಿ ಬಳಿ ನಿವಾಸಿ ಸರ್ಪರಾಜ ಚಾವುಸ್ (33), ರಿಯಾನ ಶೇಖ್ (21), ಅಯಾನ್ ಗುಳೇದಗುಡ್ಡ (19) ವಸೀಮ್ ಶೇಖ್ (22) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿರು ಪೊಲೀಸರು ವಿಜಯಪುರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. 8 ಜನ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಘಟನೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಗುರುವಾರ ರಾತ್ರಿ ಕಿಲ್ಲಾದ ಪಂಕಾ ಮಸೀದಿ ಬಳಿ ಹೋಗುವ ವೇಳೆ ಪ್ರಾರ್ಥನಾ ಮಂದಿರದಲ್ಲಿ ಸೇರಿದ್ದ ಯುವಕರ ಗುಂಪಿನಿಂದ ಕಿಡಿಗೇಡಿ ಕಲ್ಲು ತೂರಿದ್ದರಿಂದ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಕಲ್ಲು ತೂರಾಟದಲ್ಲಿ ಎಸ್ಪಿ ಸಿದ್ಧಾರ್ಥ ಗೋಯಲ್ ಸೇರಿದಂತೆ ಇಬ್ಬರು ಪೊಲೀಸ್ ಕಾನ್ಸಟೇಬಲ್, ಓರ್ವ ವ್ಯಕ್ತಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾಗಿದ್ದವು.ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ ಬಳಿಕ ಕೆಲ ನಿಮಿಷದ ಗಲಾಟೆ ನಡೆದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಿಡಿಗೇಡಿಗಳು ತರಕಾರಿ ತುಂಬಿದ್ದ ತಳ್ಳುವ ಗಾಡಿಗೆ ಬೆಂಕಿ ಹಚ್ಚಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟರು.
ಪ್ರತಿಭಟನೆಗೆ ಮುಂದಾದ ಹಿಂದೂ ಕಾರ್ಯಕರ್ತರು:ಬಾಗಲಕೋಟೆ ಕಿಲ್ಲಾ ಓಣಿಯಲ್ಲಿ ಶುಕ್ರವಾರ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಭಾಗಿಯಾಗಿ ಘಟನೆಯನ್ನು ಖಂಡಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಬಳಿಕ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ನಡೆಸಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ಅಂಗಡಿ, ಮುಂಗಟ್ಟು ಬಂದ್ ಮಾಡಲಾಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ರುಚಿ ತೋರಿಸಿ ಜನರನ್ನು ಚದುರಿಸಿದರು. ಮಧ್ಯಾಹ್ನದ ನಗರದಲ್ಲಿ ಬಹುತೇಕ ಅಂಗಡಿ, ಮುಂಗಟ್ಟು ಬಂದ್ ಆಗಿದ್ದವು. ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಸದ್ಯ ನಗರದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ಶಾಂತಿ ಸುವ್ಯವಸ್ಥೆಗೆ ಶ್ರಮಿಸುತ್ತಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಡಿಸಿ ಸಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಎಸ್ ಪಿ ಸಿದ್ದಾರ್ಥ ಗೋಯೆಲ್ ಅವರ ಜೊತೆ ಚರ್ಚಿಸಿದರು.
ಪೊಲೀಸರ ಸರ್ಪಗಾವಲು:ಮುಂಜಾಗೃತಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 5 ಜನ ಎಸ್ಪಿಗಳು, 3 ಜನ ಎಎಸ್ಪಿ, 6 ಜನ ಡಿಎಸ್ಪಿಗಳು, 18 ಜನ ಸಿಪಿಐ, 41 ಜನ ಪಿಎಸ್ಐ, 60 ಜನ ಎಎಸ್ಐ, 552 ಜನ ಪೊಲೀಸ್ ಕಾನ್ಸಟೇಬಲ್ , 250 ಹೋಮ್ ಗಾರ್ಡ್ಸ್, 10 ಕೆಎಸ್ಆರ್‌ಪಿ ತುಕಡಿ ಸೇರಿದಂತೆ 750ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆ ಬೆಳಗಾವಿ ಉತ್ತರ ವಲಯದ ಐಜಿಪಿ ಭೇಟಿ ನೀಡಿದ್ದು, ಶನಿವಾರ ಎಡಿಜಿಪಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಸಾರ್ವಜನಿಕರು ಶಾಂತಿ, ಸುವ್ಯವಸ್ಥೆಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ನಿಷೇಧಾಜ್ಞೆ ಜಾರಿ:ಕಲ್ಲು ತೂರಾಟ ನಡೆದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಲ್ಲಿ ಫೆ.19ರ ತಡರಾತ್ರಿಯಿಂದಲೇ 24ರವರೆಗೆ ಕಲಂ 163 ಕಾಯ್ದೆ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ್ ಆದೇಶಿಸಿದ್ದಾರೆ.
ಉಪಚುನಾವಣೆ ಮೇಲೆ ಪ್ರಭಾವ?ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಮುಂಬರುವ ಬಾಗಲಕೋಟೆ ಉಪಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯುಂತಿಲ್ಲ. ರಾಜಕೀಯ ಪಕ್ಷಗಳು ಮುಖಂಡರಿಂದ ಆರೋಪ, ಪ್ರತ್ಯಾರೋಪಗಳು ಆರಂಭಗೊಂಡಿದ್ದು, ವಾಗ್ದಾಳಿ ಸಮರಕ್ಕೆ ಅಂತ್ಯ ಬೀಳುವ ಲಕ್ಷಣ ಕಾಣಿಸುತ್ತಿಲ್ಲ. ಇದೇ ವಿಚಾರವಾಗಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಬಾಕ್ಸ್ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೆ ಕ್ರಮ:
ಯಾರೇ ತಪ್ಪು ಮಾಡಲಿ ಕಠಿಣ ಕ್ರಮ ಕೈಗೊಳ್ಳುವ ಕೆಲಸವನ್ನು ಸರಕಾರ ಹಾಗೂ ಅಧಿಕಾರಿಗಳು ಮಾಡುತ್ತಲಿದ್ದಾರೆ. ಘಟನೆ ಆಗಬಾರದಿತ್ತು, ಯಾವುದೇ ಪ್ರಚೋದನಾತ್ಮಕ ಕೃತ್ಯ ನಡೆಯಬಾರದು, ಕೃತ್ಯ ಎಸಗಿದವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಯಾರ್ಯಾರಿದ್ದಾರೆ ಅವರನ್ನೂ ಬಂಧಿಸುತ್ತೇವೆ, ಶಾಂತಿ ಸಭೆ ನಡೆಸಲಾಗುವುದು ಎಂದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ಕಾಂಗ್ರೆಸ್ ಸಹಕಾರದಿಂದಲೇ ಈ ಕೃತ್ಯ ನಡೆದಿದೆ ಎಂಬ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿಕೆಗೆ, ಅವನಿಗೆ ಮಾಡೋದಕ್ಕೆ ಏನು ಕೆಲಸ ಇದೆ ಎಂದು ಹರಿಹಾಯ್ದರು.ಸದ್ಯ ಪರಿಸ್ಥಿತಿ ಶಾಂತವಾಗಿದೆ. ಘಟನೆ ಆಗಬಾರದಿತ್ತು.ಎಲ್ಲರೂ ಶಾಂತಿಯಿಂದ ಇರಿ. ಶಾಂತಿ ಸಭೆ ಕರೆಯಲಾಗಿದೆ. ಎರಡು ಕಡೆಯ ಜನರು ಸೇರಲಿದ್ದಾರೆ. ಆದಷ್ಟು ಬೇಗ ಪರಿಸ್ಥಿತಿ ಸರಿ ಮಾಡುತ್ತೇವೆ.
- ಸಂಗಪ್ಪ ಜಿಲ್ಲಾಧಿಕಾರಿಉದ್ದೇಶ ಪೂರ್ವಕವಾಗಿ ಕಲ್ಲು ತೂರಾಟ ನಡೆಸಿರುವುದು ಖಂಡನೀಯ. ಪೊಲೀಸರಿಗೆ ಧೈರ್ಯ ಇದ್ರೆ ಆ ಗುಂಪಿನ ನಾಲ್ಕು ಜನರಿಗೆ ಹೊಡೆಯಿರಿ ನೋಡೋಣ. ಮೇಲೆ ನರೇಂದ್ರ ಮೋದಿ ಸರಕಾರ ಇದೆ ಅನ್ನೋದನ್ನ ನೆನಪಿಟ್ಟುಕೊಳ್ಳಿ.
- ವೀರಣ್ಣ ಚರಂತಿಮಠ ಮಾಜಿ ಶಾಸಕಹಿಂದೂ ಸಮಾಜ ಹೇಡಿ ಸಮಾಜ ಅಲ್ಲ. ನಾವು ಸಹನತೆಯಿಂದ ಇರುತ್ತೇವೆ. ಅದು ನಮ್ಮ ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ. ಕಲ್ಲು ಎಸೆಯೋದು ಚಪ್ಪಲಿ ಎಸೆಯೋದು ಏನಿದು. ಯಾರೋ ನಾಲ್ಕು ಜನರನ್ನು ಬಂಧಿಸಿದರೆ ಮುಗಿಯಲ್ಲ. ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು. ಸರ್ಕಾರ ಸೂಕ್ತ ತನಿಖೆ ಮಾಡಬೇಕು, ತನಿಖೆ ಮೊಟಕುಗೊಳಿಸಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ.
- ನಾರಾಯಣಸಾ ಬಾಂಡಗೆ ರಾಜ್ಯ ಸಭಾಸದಸ್ಯ