ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಿಂದೂ ಮನೆಯ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಇಡೀ ನಗರ ಬೂದಿ ಮುಚ್ಚಿದ ಕೆಂಡದಂತಾಗಿ, ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ಸೋಮವಾರ ತಡರಾತ್ರಿ ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂ ಮಹಿಳೆ ವಾಸುತ್ತಿರುವ ಮನೆಯ ಮೇಲೆ ಅನ್ಯ ಕೋಮಿನ ಯುವಕರ ತಂಡ ಏಕಾಏಕಿ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ಎರಡು ಕೋಮಿನ ಜನ ಜಮಾಯಿಸಿದ್ದರಿಂದಾಗಿ ಸೋಮವಾರ ತಡರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ.

ವಿಜಯಪುರ ಬಡಾವಣೆಯ ಸುಧಾ ಎನ್ನುವರ ಮನೆಯ ಮೇಲೆ ಸೋಮವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಇದರಿಂದ ಭಯ ಬೀತರಾದ ಕುಟುಂಬದವರು ಅಕ್ಕ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಇಬ್ಬರು ಅಪ್ರಾಪ್ತರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಜಮಾಸಿದ್ದರಿಂದಾಗಿ ವಿಜಯಪುರ ಬಡಾವಣೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅನ್ಯ ಕೋಮಿನ ನೂರಾರು ಜನ ಬಸವನಹಳ್ಳಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡರು.


ಇದೇ ವೇಳೆ ಹಿಂದೂ ಮನೆ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹಿಂದುಪರ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯರು ಪೊಲೀಸ್ ಠಾಣೆಗೆ ಆಗಮಿಸಿದ್ದರಿಂದಾಗಿ ಪೊಲೀಸ್ ಠಾಣೆ ಆವರಣದಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಲ್ಲು ತೂರಾಟ ನಡೆಸಿದ್ದಾರೆ ಎನ್ನರಾದ ಅಪ್ರಾಪ್ತರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತರ ವಿರುದ್ಧ‌ ಕಲ್ಲು ತೂರಾಟಕ್ಕೆ ಒಳಗಾದ ಮನೆ ಮಾಲೀಕರು ಹಾಗೂ ಹಿಂದೂಪರ‌ ಸಂಘಟನೆ ಮುಖಂಡರಾದ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ.ಗೌಡ ಹಲ್ಲೆ‌‌ ನಡೆಸಿದ್ದಾರೆ ಎಂದು ಅಪ್ರಾಪ್ತರ ಪಾಲಕರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮನೆ ಮಾಲೀಕ ವಿಶ್ವನಾಥ್, ಸೋಮವಾರ ರಾತ್ರಿ ಊಟ ಮಾಡಿ ಕುಳಿತಿದ್ದಾಗ ಏಕಾಏಕಿ ಮನೆಯ ಮೇಲೆ ಕಲ್ಲುಗಳು ಬಿದ್ದವು. ಈ ವೇಳೆ ಕೆಲ ಯುವಕರು ಮನೆಯ ಕಿಟಕಿಯಲ್ಲಿ ಬಗ್ಗಿ ನೋಡುತ್ತಿದ್ದರು. ಯಾವ ಕಾರಣಕ್ಕಾಗಿ ಕಲ್ಲುತೂರಾಟ ನಡೆಸಿದರು ಎಂಬುವುದು ಗೊತ್ತಿಲ್ಲ. ಘಟನೆಯಿಂದ ಇಡಿ ಕುಟುಂಬದವರು ಭಯಭೀತರಾಗಿದ್ದೆವು. ಕೂಡಲೇ ನನ್ನ ಮಗ ಆತನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ. ಕೂಡಲೇ ಸ್ಥಳಕ್ಕೆ ಬಂದ ಆತನ ಸ್ನೇಹಿತರು ಮನೆ ಮೇಲೆ ಕಲ್ಲುತೂರಾಟ ನಡೆಸಿದವರನ್ನು ಹಿಡಿದಾಗ ಅವರು ಅನ್ಯಕೋಮಿನವರು ಎಂಬುದು ಗೊತ್ತಾಯಿತು. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ‌ ಕ್ರಮ‌ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಮುಖಂಡರ ಭೇಟಿ

ಕಲ್ಲುತೂರಾಟ ನಡೆದ ವಿಜಯಪುರ ಬಡಾವಣೆಯ ಸುಧಾ ಎನ್ನುವರ ಮನೆಗೆ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಕುಟುಂಬದವರ ಬಳಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್ ಕುಮಾರ್, ಪ್ರಮುಖರಾದ ಕವಿತಾ, ಅಂಕಿತಾ ಮೊದಲಾದವರಿದ್ದರು.

ಬಾಲಕರ ಮೇಲೆ ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ.ಗೌಡ ಹಲ್ಲೆ ನಡೆಸಿಲ್ಲ. ಹುಡುಗರನ್ನು ನಾವು ಹಿಡಿದುಕೊಂಡ ಬಳಿಕ ಅವರು ಸ್ಥಳಕ್ಕೆ ಬಂದಿದ್ದರು. ಈಗ ನೋಡಿದರೆ ಪೊಲೀಸರು ಸಂತೋಷ್ ಕೋಟ್ಯಾನ್ ಹಾಗೂ ಶ್ಯಾಮ್ ವಿ ಗೌಡ ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಆ ಹುಡುಗರೇ ಕಲ್ಲು ಹೊಡೆದಿದ್ದನ್ನು ನಾವು ನೋಡಿದ್ದೇವೆ. ಅವರು ಓಡಿಹೋಗುವಾಗ ಹಿಡಿದುಕೊಂಡಿದ್ದೇವೆ.

ಇಕ್ಬಾಲ್ ಕಲ್ಲು ತೂರಾಟ ನಡೆದ ಮನೆಯ ಪಕ್ಕದ ಮನೆ ನಿವಾಸಿ

ಹೆಣ್ಣು ಮಕ್ಕಳ ಸಹಾಯಕ್ಕೆ ತೆರಳಿದ್ದೆವು. ಆದರೆ ಪೊಲೀಸರು ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ತಕ್ಷಣ ನಾವು ಹೆದರಿಕೊಳ್ಳುವುದಿಲ್ಲ. ಇನ್ನಾದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದೆ ದೊಡ್ಡಮಟ್ಟದ ಅವಘಡ ನಡೆಯುವುದರಲ್ಲಿ ಅನುಮಾನವಿಲ್ಲ.

ಸಂತೋಷ್ ಕೋಟ್ಯಾನ್ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ