ಸಾರಾಂಶ
ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಲಿ, ಬೇರೆ ಯಾರೇ ಆದರೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡೋದನ್ನು ಖಡಾಖಂಡಿತವಾಗಿ ಖಂಡಿಸುತ್ತೇವೆ ಎಂದು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಲಿ, ಬೇರೆ ಯಾರೇ ಆದರೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡೋದನ್ನು ಖಡಾಖಂಡಿತವಾಗಿ ಖಂಡಿಸುತ್ತೇವೆ ಎಂದು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಬಸ್ಸಿಗೆ ಕಲ್ಲು ತೂರಿದ ಘಟನೆಯನ್ನು ಕಾಂಗ್ರೆಸ್ ಪಕ್ಷವೇ ಖಂಡಿಸಿದೆ, ನಾವೂ ಖಂಡಿಸುತ್ತೇವೆ. ಆದ್ದರಿಂದಲೇ ನಮ್ಮ ಪಕ್ಷದ ಸರ್ಕಾರ ಇದ್ದರೂ ಘಟನೆ ಕುರಿತು ಎಫ್‌ಐಆರ್ ದಾಖಲಾಗಿದೆ ಎಂದರು.
ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಅವರು ಅಪರಾಧಿ ಹೌದೋ ಅಲ್ಲವೋ ಎನ್ನುವುದು ನ್ಯಾಯಾಲಯದಲ್ಲಿ ತೀರ್ಮಾನ ಆಗಲಿದೆ. ಅವರು ಬಸ್ಸಿಗೆ ಕಲ್ಲು ತೂರಿದ್ದು ನಿಜವಾಗಿದ್ದರೆ ಅದು ಖಂಡನೀಯ. ಆದರೆ ಅಭಿವೃದ್ಧಿ ವಿಚಾರದಲ್ಲಿ ವಿಫಲವಾಗಿರುವ ಮೇಯರ್ ಸೇರಿದಂತೆ ಆಡಳಿತ ಸದಸ್ಯರು ಇದೇ ವಿಚಾರವನ್ನು ಕೆದಕಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರವೀಣ್‌ಚಂದ್ರ ಆಳ್ವ ಆರೋಪಿಸಿದರು.ಪಾಲಿಕೆ ದಿವಾಳಿ:
ಮಹಾನಗರ ಪಾಲಿಕೆ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯ ಒಂದೇ ಒಂದು ರು.ನ್ನು ಮೇಯರ್ ಇದುವರೆಗೂ ಬಿಡುಗಡೆ ಮಾಡದೆ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿದೆ. ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದ್ದು, ಮೇಯರ್ಕೂಡಲೆ ಈ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ವಿನಯರಾಜ್, ನವೀನ್ ಡಿಸೋಜ, ಲ್ಯಾನ್ಸಿಲಾಟ್ ಪಿಂಟೊ, ಕೇಶವ್, ಅಬ್ದುಲ್ ರವೂಫ್, ಅನಿಲ್ ಕುಮಾರ್, ಜೆಸಿಂತ ವಿಜಯ ಆಲ್ಫ್ರೆಡ್, ಝೀನತ್ ಸಂಶುದ್ದೀನ್ ಮತ್ತಿತರರು ಇದ್ದರು.