ಕನ್ನಡಪ್ರಭ ವಾರ್ತೆ ಮಂಡ್ಯ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ರೈತರ ವಾಹನಗಳಿಗೆ ಟೋಲ್ ಸುಂಕ ವಸೂಲಿ ನಿಲ್ಲಿಸಿ, ಪಂಜಾಬ್ ಸರ್ಕಾರ ಮಾದರಿ ಟೋಲ್ ನಾಕಾ ಬಂದ್ ರಾಜ್ಯದಲ್ಲಿಯೂ ಜಾರಿಗೆ ಆಗ್ರಹಿಸಿ ಜೂ.23ರಂದು ರಾಷ್ಟ್ರೀಯ ಹೆದ್ದಾರಿ ಬಳಿ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಮಾಡಿರುವ ಟೋಲ್ ಸುಂಕ ವಸೂಲಿ ಕೇಂದ್ರಗಳಲ್ಲಿ ರೈತರಿಗೆ, ರೈತರ ವಾಹನಗಳಿಗೆ ವಸೂಲಿ ಕಿರುಕುಳ ಹೆಚ್ಚುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೈತರ ವಾಹನಗಳಿಗೆ ವಿನಾಯಿತಿ ನೀಡಿದರೂ ಸಹ ಕಬ್ಬು, ಭತ್ತ, ಹಣ್ಣು, ತರಕಾರಿ ಸಾಗಾಣಿಕೆ ವಾಹನಗಳ ಹಾಗೂ ರೈತ ಮುಖಂಡರ ವಾಹನಗಳ ತಡೆದು ಬಲವಂತದಿಂದ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕೆಲವು ಹೆದ್ದಾರಿಗಳ ಪಕ್ಕದಲ್ಲಿ ಸರ್ವೀಸ್ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳಿಲ್ಲ, ಈ ಬಗ್ಗೆ ಗಮನ ಹರಿಸದೆ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿದ್ದಾರೆ. ರೈತಪರ ಹೋರಾಟ ನಡೆಸುವ ಕಾರ್ಯಗಳಿಗೆ ಹೋಗುವ ರೈತ ಮುಖಂಡರ ವಾಹನಗಳನ್ನು ತಡೆದು ಬೆದರಿಸಿ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಪಂಜಾಬ್ ಸರ್ಕಾರ ಮಾದರಿ ಜಾರಿಯಾಗಲಿ:
ವಾಹನ ಖರೀದಿಸುವಾಗ ರಸ್ತೆ ತೆರಿಗೆ ಕಟ್ಟಿ ವಾಹನ ಖರೀದಿಸುತ್ತಿದ್ದಾರೆ. ಮತ್ತೊಮ್ಮೆ ರಸ್ತೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಆದ್ದರಿಂದ ಸುಂಕ ವಸೂಲಿಗೆ ಅವಕಾಶವಿಲ್ಲ ಎಂದು ಸುಂಕ ವಸೂಲಿ ಕೇಂದ್ರಗಳನ್ನು ಪಂಜಾಬ್ ಸರ್ಕಾರ ರದ್ದು ಮಾಡಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಪಂಜಾಬ್ ಸರ್ಕಾರ ಮಾದರಿ ಜಾರಿಗೆ ಆಗ್ರಹಿಸಿ ರೈತ ಸಂಘಟನೆಗಳಿಗೆ, ಸಂಘ ಸಂಸ್ಥೆಗಳಿಗೆ ರಾಜ್ಯಾದ್ಯಂತ ಟೋಲ್ ನಾಕಾ ಮುಂದೆ ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ. ಜಿಲ್ಲಾಡಳಿತ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರ ಕರೆಸಿ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೇ ಟೋಲ್ ನಾಕಾ ಬಂದ್ ಮಾಡುವ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ನಿಗದಿ ಮಾಡಿದ ಕಬ್ಬಿನ ಹೆಚ್ಚುವರಿ ಬೆಲೆ ಟನ್ ಗೆ ₹100 ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸುವ ತನಕ ಕಾರ್ಖಾನೆಗಳ ಆರಂಭಕ್ಕೆ ಅನುಮತಿ ಕೊಡಬಾರದು. ರೈತರು ಸಹ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡದೆ ಬಾಕಿ ಹಣ ವಸೂಲಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರದ ಆದೇಶಗಳನ್ನು ಧಿಕ್ಕರಿಸಿ ಪದೇ ಪದೇ ಪ್ರತಿ ವರ್ಷ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ. ರೈತರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ರಾಜ್ಯದ ರೈತರಿಗೆ ಸಂಕಷ್ಟ ಉಂಟು ಮಾಡುವ ವಿದ್ಯುತ್ ಖಾಸಗೀಕರಣಕ್ಕೆ ಟಾಟಾ ಕಂಪನಿಯವರು ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ತಿರಸ್ಕರಿಸಬೇಕು. ಒರಿಸ್ಸಾ ರಾಜ್ಯದಲ್ಲಿ ಖಾಸಗಿ ಕಂಪನಿಯವರು ನಿರ್ವಹಣೆ ಮಾಡಲು ವಿಫಲರಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ಅಣ್ಣೂರ್ ಮಹೇಂದ್ರ, ಸೊ.ಸಿ. ಪ್ರಕಾಶ್, ಸಂತೋಷ್ ಗೌಡ, ಹತ್ತಳ್ಳಿ ದೇವರಾಜ್, ಮಿಲಿಟರಿ ಕುಮಾರ ಹಾಜರಿದ್ದರು.