ಸಾರಾಂಶ
ನರಗುಂದ: ನರಗುಂದ ಮತಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ನಾ ಹೆಚ್ಚು, ನಾ ಹೆಚ್ಚೆಂದು ಕಚ್ಚಾಡುವುದು ಬಿಟ್ಟು ಸಮಗ್ರ ರೈತರಿಗೆ ಬೆಳೆನಷ್ಟ ಪರಿಹಾರ ಮತ್ತು ಬೆಳೆವಿಮೆ ಕೊಡಿಸುವ ಪ್ರಯತ್ನ ಮಾಡಬೇಕು. ಪರಿಹಾರ ನೀಡುವಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟದ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಮಳೆ ಆಗಿದ್ದರಿಂದ ಬಿತ್ತಿದ ಬೆಳೆಗಳೆಲ್ಲವೂ ಸಂಪೂರ್ಣ ನಾಶಗೊಂಡಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬೆಳೆ ಸಮೀಕ್ಷೆ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಬೆಳೆ ಸಮೀಕ್ಷೆ ಕೈಬಿಟ್ಟು ಸಮಗ್ರ ರೈತರಿಗೆ ಬೆಳೆನಷ್ಟ ಪರಿಹಾರ ಕೊಡಬೇಕು. ಬೆಳೆ ಸಮೀಕ್ಷೆ ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.ಹಾಲಿ ಶಾಸಕರಿಗೆ ಮತ್ತು ಮಾಜಿ ಶಾಸಕರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ತಮ್ಮ ವೈಯಕ್ತಿಕ ಬೆಳವಣಿಗೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಕರೆಂಟ್ ಹೋದರೆ ಬೆಳಕಿಗಾಗಿ ಚಿಮಣಿ(ಸೀಮೆ) ಎಣ್ಣಿ ಸಿಗುತ್ತಿಲ್ಲ. ನಾವು ಹಿಂದಿನ ಕಾಲದಲ್ಲಿದ್ದೇವೇನು ಎನಿಸುತ್ತಿದೆ. ಆರೋಪ- ಪ್ರತ್ಯಾರೋಪ ಬಿಟ್ಟು ಜನನಾಯಕರಾಗಿರಿ. ಮತಕ್ಷೇತ್ರದಲ್ಲಿದ್ದ ಕೈಗಾರಿಕೆ ಬಂದ್ ಮಾಡಿ ಜನರಿಗೆ ಉದ್ಯೋಗ ಸಿಗದಂತೆ ಮಾಡಿ, ಜನರ ಬಾಯಲ್ಲಿ ಮಣ್ಣು ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಾಲಮನ್ನಾ ಮಾಡಬೇಕು. ವಿಮೆ ತುಂಬಿದ ರೈತರಿಗೂ ವಿಮೆ ಹಣ ಸರಿಯಾಗಿ ನೀಡುತ್ತಿಲ್ಲ. ಹೀಗಾದರೆ ಬೆಳೆವಿಮೆ ಯಾರು ತುಂಬುತ್ತಾರೆ. ಸರ್ಕಾರ ಮತ್ತು ಖಾಸಗಿ ವಿಮಾ ಕಂಪನಿಗಳು ಹೊಂದಾಣಿಕೆ ಮಾಡಿಕೊಂಡಿವೆ. ಹೀಗಾಗಿ ರೈತರಿಗೆ ವಿಮೆ ಹಣ ಸಿಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಿಲ್ಲ. ಕಳಸಾ ಬಂಡೂರಿ ರಾಜ್ಯದ ಅರಣ್ಯದಲ್ಲಿದೆ. ಹೀಗಿರುವಾಗ ಕೇಂದ್ರದ ಅನುಮತಿ ಯಾಕೆ ಎಂದು ಪ್ರಶ್ನಿಸಿದರು. ಮಹಾದಾಯಿ ಯೋಜನೆಯಿಂದ ವಿದ್ಯುತ್ ಮಾತ್ರ ಸಿಗುತ್ತದೆ. ಕಳಸಾ ಬಂಡೂರಿಯಿಂದ ಮಲಪ್ರಭಾ ನದಿಗೆ ನೀರು ಬರುತ್ತದೆ. ಆದ್ದರಿಂದ ಕಳಸಾ ಬಂಡೂರಿ ಯೋಜನೆ ಜಾರಿಯಾಗುವಂತೆ ಪ್ರಯತ್ನಿಸಿ. ಅದನ್ನು ಬಿಟ್ಟು ಆರೋಪ- ಪ್ರತ್ಯಾರೋಪ ಮಾಡಬೇಡಿ ಎಂದರು.
ಸಮಗ್ರ ರೈತರಿಗೆ ಶೀಘ್ರದಲ್ಲಿ ಬೆಳೆನಷ್ಟ ಪರಿಹಾರ ನೀಡದಿದ್ದಲ್ಲಿ ಶೀಘ್ರವೇ ನರಗುಂದ ಬಂದ್ ಕರೆ ನೀಡಲಾಗುವುದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕೇಂದ್ರ ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.