ಕನ್ನಡಪ್ರಭ ವಾರ್ತೆ ಅಥಣಿ ರಾಜ್ಯದಲ್ಲಿ ಸಹಕಾರ ತತ್ವದ ಮೇಲೆ ನಡೆಯುತ್ತಿರುವ ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಬೇಕು. ಸಹಕಾರ ಸಂಘದ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಹಮತದಿಂದ ಕಾರ್ಯನಿರ್ವಹಿಸಬೇಕು. ರಾಜಕೀಯ ಹಿತಾಸಕ್ತಿ ಇಟ್ಟುಕೊಂಡು ಸಹಕಾರಿ ತತ್ವದ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿ ಸಹಕಾರ ತತ್ವದ ಮೇಲೆ ನಡೆಯುತ್ತಿರುವ ಸಹಕಾರಿ ಸಂಘಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಬೇಕು. ಸಹಕಾರ ಸಂಘದ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಹಮತದಿಂದ ಕಾರ್ಯನಿರ್ವಹಿಸಬೇಕು. ರಾಜಕೀಯ ಹಿತಾಸಕ್ತಿ ಇಟ್ಟುಕೊಂಡು ಸಹಕಾರಿ ತತ್ವದ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಇಲ್ಲಿನ ರಾಯಲ್ ಸಭಾಂಗಣದಲ್ಲಿ ತಾಲೂಕ ಸಹಕಾರ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಅಥಣಿ ಸಹಕಾರ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಹಕಾರಿ ಸೌಹಾರ್ದ ಕಾನೂನು ತಿದ್ದುಪಡಿ ತರುವ ಸಮಿತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನನ್ನ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಎಲ್ಲ ಸಹಕಾರಿಗಳ ಅಭಿಪ್ರಾಯ ಸಂಗ್ರಹಿಸಿ ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಸಹಕಾರಿ ಸೌಹಾರ್ದ ಕಾನೂನು ಜಾರಿಗೆ ತರಲಾಗಿದೆ. ಅಧಿವೇಶನದಲ್ಲಿ ಮಂತ್ರಿಮಂಡಲದ ಒಪ್ಪಿಗೆ ಪಡೆದು ರಾಜ್ಯಪಾಲರಿಂದ ಅಂಗೀಕಾರವಾಗಿದೆ ಎಂದು ಹೇಳಿದರು.ಸಹಕಾರಿ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪಿಕೆಪಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಹಕಾರ ಫೌಂಡೇಶನ್ ಎಂಬ ಒಗ್ಗಟ್ಟಿನ ವೇದಿಕೆ ಸಂಘಟಿಸಿರುವುದು ಒಳ್ಳೆಯ ಬೆಳವಣಿಗೆ. ಇದು ತಮ್ಮೆಲ್ಲರ ಜೀವನ ಭದ್ರತೆಗಾಗಿ ಒಳ್ಳೆಯ ಅಡಿಪಾಯವಾಗಿದೆ. ರಾಜ್ಯದ ಸಹಕಾರಿ ಸಂಘಗಳು ಮತ್ತು ಬಿಡಿಸಿಸಿ ಬ್ಯಾಂಕ್‌ಗಳ ಕಾರ್ಯದರ್ಶಿಗಳ ಸಂಘಟನೆ ಈಗಾಗಲೇ ಸ್ಥಾಪನೆಯಾಗಿದೆ. ಅದರ ಜೊತೆಗೆ ಅಥಣಿ ಮತ್ತು ಕಾಗವಾಡ ತಾಲೂಕಿನ ಪಿಕೆಪಿಎಸ್ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಸಂಘಟಿಸಿರುವ ಈ ಸಹಕಾರಿ ಫೌಂಡೇಶನ್ ಸದಸ್ಯರ ಹಿತ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂದರು.ಬೆಳಗಾವಿಯ ಸಹಕಾರಿ ಸಂಘಗಳ ಉಪ ನಿಬಂಧಕ ರವೀಂದ್ರ ಪಾಟೀಲ ಮಾತನಾಡಿ, ಸಹಕಾರಿ ತತ್ವದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಹಕಾರಿ ಸಂಘಗಳು ಹಾಗೂ ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ ತಮ್ಮ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು, ವಿವಿಧ ವಿಚಾರ ಸಂಕೀರ್ಣ ಮತ್ತು ಸಮಾವೇಶಗಳನ್ನು ನಡೆಸಲು ಅಥಣಿ ಸಹಕಾರ ಫೌಂಡೇಶನ್ ಉತ್ತಮ ವೇದಿಕೆಯಾಗಿದೆ. ಅಥಣಿ ತಾಲೂಕ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಶೇ.80 ರಷ್ಟು ಸಹಕಾರಿ ಸಂಘಗಳು ಗಣಕೀಕೃತ ಸೇವೆಗೆ ಒಳಪಟ್ಟಿವೆ. ಜಿಲ್ಲೆಯಲ್ಲಿಯೇ ಅಥಣಿ ತಾಲೂಕಿನ ಸಹಕಾರಿ ಸಂಘಗಳು ಕಂಪ್ಯೂಟರೀಕರಣ ಸೇವೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಹೇಳಿದರು.ಬೆಳಗಾವಿ ಜಿಲ್ಲಾ ಸಹಕಾರಿ ತರಬೇತಿ ಅಧಿಕಾರಿ ಶ್ರೀಶೈಲ ಯಡಹಳ್ಳಿ ಮಾತನಾಡಿ, ಯಶಸ್ವಿನಿ ಆರೋಗ್ಯ ಯೋಜನೆಯ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ವಿವಿಧ ಸಹಕಾರಿ ಸಂಘಗಳ ಯಶಸ್ವಿನಿ ಯೋಜನೆಯಡಿ ನೊಂದಾಯಿಸಲ್ಪಟ್ಟ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಈ ಸಂದರ್ಭದಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಕಾಗವಾಡದ ಸಹಕಾರಿ ಧುರೀಣ ಪರಸಗೌಡ ಪಾಟೀಲ, ಕೆಎಂಎಫ್ ನಿರ್ದೇಶಕ ಮಹದೇವ ಬಿಳಿಕುರಿ, ಸಹಕಾರಿ ಸಂಘಗಳ ಜಂಟಿ ನಿಬಂಧಕ ಕಲ್ಲಪ್ಪ ಓಬ್ಬಣ್ಣಗೋಳ, ಸಹಾಯಕ ಉಪ ನಿಬಂಧಕ ಬಾಹುಬಲಿ ಹಂಜೆ, ಬಿಡಿಸಿಸಿ ಬ್ಯಾಂಕ್ ಸಿಇಒ ಎನ್.ಜಿ.ಕಲಾವಂತ, ಈ ವೈದ್ಯ ಟೆಕ್ನಾಲಜಿ ಸಿಇಓ ಎಂ.ವಿ.ಸುಬ್ಬರಾವ್, ಅಥಣಿ ತಾಲೂಕ ಸಹಕಾರಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ, ಸಕಾರಿ ಫೌಂಡೇಶನ್ ಅಧ್ಯಕ್ಷ ಡಿ.ಎಸ್.ದಳವಾಯಿ, ಉಪಾಧ್ಯಕ್ಷ ಎಸ್.ಎಲ್.ಪೂಜಾರಿ, ಕಾರ್ಯದರ್ಶಿ ಪಿ.ಬಿ.ಅಜೂರ ಸೇರಿ ಇತರರು ಉಪಸ್ಥಿತರಿದ್ದರು. ಶಿವಯ್ಯ ಪೂಜಾರಿ ಸ್ವಾಗತಿಸಿದರು. ಪ್ರಕಾಶ ಬ್ಯಾಳಿಗೌಡರ ನಿರೂಪಿಸಿದರು. ಬಸವರಾಜ ತೇಲಿ ವಂದಿಸಿದರು.------
ಕೋಟ್ರಾಜ್ಯ ಬಜೆಟ್ ಮಂಡನೆಯಾದ ನಂತರ ಸಚಿವ ಸಂಪುಟದ ವಿಸ್ತರಣೆ ಆಗಲಿದ್ದು, ಒಂದು ತಿಂಗಳದಲ್ಲಿ ಯಾರಾದರೂ ಒಬ್ಬರು ಸಹಕಾರ ಮಂತ್ರಿಯಾಗುತ್ತಾರೆ. ಸಹಕಾರಿ ಸಂಘಗಳ ನೌಕರರಿಗೆ ತೊಡಕಾಗಿರುವ ಕೆಲವು ಸಹಕಾರಿ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು. ರಾಜ್ಯದಲ್ಲಿ ಶೀಘ್ರದಲ್ಲಿ ಈ ಕಾನೂನು ಅನುಷ್ಠಾನಗೊಳ್ಳಲಿದ್ದು, ಇದರಿಂದ ಸಹಕಾರ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳು ಆಗಲಿವೆ.ಲಕ್ಷ್ಮಣ ಸವದಿ, ಶಾಸಕ