ಜೀವಾತ್ಮ ಪರಮಾತ್ಮನಾಗಲು ಉತ್ಕೃಷ್ಟ, ಅಲೌಕಿಕ ಗಾಢ ಚಿಂತನೆ ಬೋಧಿಸುವ ವೀರಶೈವ ಪಂಚಸೂತ್ರೀಯ ಪ್ರವಚನ ಒಂದು ಮೇರು ದಾರ್ಶನಿಕ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು
ಧಾರವಾಡ: ಜೀವಾತ್ಮ ಪರಮಾತ್ಮನಾಗಲು ಉತ್ಕೃಷ್ಟ, ಅಲೌಕಿಕ ಗಾಢ ಚಿಂತನೆ ಬೋಧಿಸುವ ವೀರಶೈವ ಪಂಚಸೂತ್ರೀಯ ಪ್ರವಚನ ಒಂದು ಮೇರು ದಾರ್ಶನಿಕ ಕೃತಿಯಾಗಿ ಎಲ್ಲರ ಗಮನಸೆಳೆದಿದೆ ಎಂದು ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿಯ ಚರಂತಿಮಠ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ‘ವೀರಶೈವ ಪಂಚಸೂತ್ರೀಯ ಪ್ರವಚನ’ ಕೃತಿಯ ಲೋಕಾರ್ಪಣೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ವೀರಶೈವವು ಯಾವುದೋ ಒಂದು ಜಾತಿ, ವರ್ಗ, ಪಂಗಡ ಸೂಚಿಸದೇ, ಶಿವನ ಆಧ್ಯಾತ್ಮದ ಅನುಸಂಧಾನ ಮಾರ್ಗವಾಗಿದೆ. ಈ ಪಥದಲ್ಲಿ ಮುನ್ನಡೆಯಲು ಪಂಚಾಚಾರ್ಯರು ಐದು ಮಹರ್ಷಿಗಳಿಗೆ ಬೋಧಿಸಿದ ವಿಶಿಷ್ಟ ತತ್ವ ಪ್ರತಿಪಾದನೆ ಮಾಡಬೇಕು ಎಂದರು.
ವೀರಶೈವ ಧರ್ಮ ಸಿದ್ಧಾಂತಕ್ಕೆ ಸ್ಮತಿ, ಆಗಮ, ಶ್ರೀಸಿದ್ಧಾಂತ ಶಿಖಾಮಣಿ ಇತ್ಯಾದಿ ಅನೇಕ ಪ್ರಾಚೀನ ಗ್ರಂಥಗಳ ಆಧಾರದಲ್ಲಿ ಪಂಚಸೂತ್ರಗಳನ್ನು ವಿಸ್ತೃತವಾಗಿ ವ್ಯಾಖ್ಯಾನಿಸಲಾಗಿದೆ. ಇದರಿಂದ ಅತ್ಯಂತ ಸಾಮಾನ್ಯ ವ್ಯಕ್ತಿಯೂ ಪಂಚಸೂತ್ರಗಳನ್ನು ಅರ್ಥಮಾಡಿಕೊಳ್ಳಬಹುದು. ವಿವಿಧ ಮಠಾಧೀಶರು, ಉಪನ್ಯಾಸಕರು, ಪುರಾಣಿಕರು, ಪ್ರವಚನಕಾರರು ಈ ಗ್ರಂಥದ ಆಧಾರದಲ್ಲಿ ವಿಶೇಷ ಪಂಚಸೂತ್ರ ಪ್ರವಚನಗಳನ್ನು ಮಾಡಲು ಸಹಕಾರಿ. ಪಂಚಸೂತ್ರೀಯ ಪ್ರವಚನ ಶಿವಾದೈತ ಸಿದ್ಧಾಂತದ ಮಹಾಕಾವ್ಯ. ವೀರಶೈವ ತತ್ವಾನುಯಾಯಿಗಳ ಪಾಲಿಗೆ ಒಂದು ಅತ್ಯಮೂಲ್ಯ ಗ್ರಂಥ. ಈ ಗ್ರಂಥ ಸಾಹಿತ್ಯದ ನಾಡು ಧಾರವಾಡದಲ್ಲಿ ರೇಣುಕಾಚಾರ್ಯರ ಜಯಂತಿಯಲ್ಲಿ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ ಎಂದರು.ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ರೇಣುಕಾಚಾರ್ಯರು ‘ಶ್ರೀಸಿದ್ಧಾಂತ ಶಿಖಾಮಣಿ’ಯ ಮೂಲಕ ನಿರೂಪಿಸಿರುವ ತತ್ವಪ್ರತಿಪಾದನೆ ಕೇವಲ ವೀರಶೈವ-ಲಿಂಗಾಯತರನ್ನೇ ಕೇಂದ್ರೀಕರಿಸಿರದೇ ಸಕಲ ಜೀವಾತ್ಮರಿಗೂ ಅನ್ವಯವಾಗುತ್ತದೆ ಎಂದರು.
ಮಾಜಿ ಶಾಸಕ ಅಮೃತ ದೇಸಾಯಿ, ವೀರಶೈವ-ಲಿಂಗಾಯತ ಸಮಾಜ ಒಗ್ಗಟ್ಟು ಪ್ರದರ್ಶಿಸಲು ರೇಣುಕಾಚಾರ್ಯ ಜಯಂತಿ ವೇದಿಕೆ ಒದಗಿಸಿದೆ. ಈ ಜಯಂತಿ ಆಚರಣಾ ಸಮಿತಿ ಪದಾಧಿಕಾರಿಗಳು ಆರು ವರ್ಷಗಳಿಂದ ಭಕ್ತಿಯಿಂದ ಆಚರಿಸುತ್ತಿದ್ದಾರೆ ಎಂದರು.ಹೊಸಯಲ್ಲಾಪೂರ ಹಿರೇಮಠದ ಶಶಾಂಕ ದೇವರು, ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಉಮಾ ಕೊರವರ ಮಾತನಾಡಿದರು. ಹಿರಿಯ ಸಂಶೋಧಕ ಪ್ರೊ. ಆರ್.ಎಂ. ಷಡಕ್ಷರಯ್ಯ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಶಂಕರ ಶೆಳಕೆ, ವಕೀಲ ಅರುಣ ಚರಂತಿಮಠ, ಮುಖಂಡರಾದ ಸಿ.ಎಸ್. ಪಾಟೀಲ, ಮಂಜುನಾಥ ಸಾಲಿಮಠ, ಆಚರಣಾ ಸಮಿತಿ ಪದಾಧಿಕಾರಿಗಳಾದ ಸರೋಜಾ ಪಾಟೀಲ, ರಾಜೇಂದ್ರ ಹಿರೇಮಠ, ಈರಯ್ಯ ರಾಚಯ್ಯನವರ, ಬಸವರಾಜ ಕುರಹಟ್ಟಿಮಠ, ಚನ್ನಬಸಯ್ಯ ಬಾಲೇದಮಠ, ಮಹೇಶ ಗುರಸ್ಥಳಮಠ, ಜಗದೀಶ ಹಿರೇಮಠ ಇದ್ದರು. ಹೊಸಯಲ್ಲಾಪುರ ಹಿರೇಮಠ ಗದಗಯ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಿರೇಮಠ ಸ್ವಾಗತಿಸಿದರು.ಯುಗಮಾನೋತ್ಸವ
ಯುಗಾದಿ ದಿನವೇ ಸದಾಶಿವನು ತನ್ನ ಮೊದಲ ಸೃಷ್ಟಿಯಲ್ಲಿ ಪಂಚಾಚಾರ್ಯರರನ್ನು ಸೃಷ್ಟಿಸಿ ಅವರಿಗೆ ‘ಜಗದ್ಗುರುತ್ವ’ ಕರುಣಿಸಿದ್ದರಿಂದ ಪ್ರತೀ ವರ್ಷ ಯುಗಾದಿಯ ನಂತರದಲ್ಲಿ ಕೇವಲ ಕರ್ನಾಟಕ ಅಲ್ಲದೇ ಭಾರತದಾದ್ಯಂತ ನೆಲೆಸಿರುವ ಭಕ್ತಗಣ ರೇಣುಕಾದಿ ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಳ್ಳಲು ಸರ್ವರೂ ಒಗ್ಗೂಡಿ ಶ್ರಮಿಸಬೇಕು ಎಂದು ಕಾಶಿ ಜ್ಞಾನ ಪೀಠ ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.