ಸೋಮಾರಿತನ ಬಿಟ್ಟು ಸಮಸ್ಯೆಗಳಿಗೆ ಸ್ಪಂದಿಸಿ: ಶಾಸಕ ಷಡಕ್ಷರಿ

| Published : Jun 28 2024, 12:50 AM IST

ಸಾರಾಂಶ

ತಿಪಟೂರು ತಾಲೂಕಿನ ನೊಣವಿನಕೆರೆಯ ಉಡಿಸಲ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಗುರುವಾರ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ಜನಸಾಮಾನ್ಯರು, ರೈತರ ಸಮಸ್ಯೆಗಳನ್ನು ಮನೆ ಬಾಗಿಲಿನಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಧಿಕಾರಿ ವರ್ಗದವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಬೂಬುಗಳನ್ನು ಹೇಳಿಕೊಂಡು ಮುಂದೂಡುವುದು, ಅಲೆದಾಡಿಸುವುದು ಬಿಟ್ಟು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕಿನ ನೊಣವಿನಕೆರೆಯ ಉಡಿಸಲ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಹಾಗೂ ರೈತರು ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡಿಕೊಡಬೇಕು.

ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧವನ್ನು ಕಟ್ಟಿಸಿರುವುದು ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನರಿಗೆ ಸಿಗುವ ಮೂಲಕ ಕಡಿಮೆ ಅವಧಿಯಲ್ಲಿ ಕೆಲಸಗಳಾಗಬೇಕೆಂಬುದಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮಸನ್ವಯತೆಯಿಂದ ಕೆಲಸ ಮಾಡಿಕೊಡಬೇಕಾಗಿದೆ. ನಾನು ಸಹ ವಾರದ 4 ದಿನಗಳು ನಗರಸಭೆ ಮತ್ತು ಮಿನಿ ವಿಧಾನಸೌಧದಲ್ಲಿರುತ್ತೇನೆ.

ನಿಮ್ಮ ಕೆಲಸ ಕಾರ್ಯಗಳನ್ನು ಆದಷ್ಟು ತುರ್ತಾಗಿ ಮಾಡಿಸಿಕೊಡುತ್ತೇನೆ. ನಮ್ಮಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ ಸೋಮಾರಿ ಅಧಿಕಾರಿಗಳಿದ್ದರೆ ನಾನೆ ಅವರನ್ನು ಗುರುತಿಸಿ ಹೊರ ಕಳುಹಿಸುವ ಮುಂಚೆಯೇ ಅವರೇ ಹೋಗಬೇಕು. ರೈತರಿಗೆ, ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲ ಎಂದ ಶಾಸಕರು ಇಲ್ಲಿ ಬಂದಿರುವ ಅರ್ಜಿಗಳನ್ನು ಕಂಪ್ಯೂಟರೀಕರಣಗೊಳಿಸಿ ಆಯಾ ಇಲಾಖೆಯ ಅಧಿಕಾರಿಗಳು ಕೂಡಲೆ ಪರಿಶೀಲನೆ ಮಾಡಿ ಖುದ್ದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚಿಸಿದರು.ನಾನೇ ಖುದ್ದು ಸಮಸ್ಯೆ ಬಗೆಹರಿಸುತ್ತೀನಿ: ಡೀಸಿ

ಡೀಸಿ ಶುಭಕಲ್ಯಾಣ್ ಮಾತನಾಡಿ, ಈಗಾಗಲೇ 8 ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದು ಇದು 9ನೇ ತಾಲೂಕಾಗಿದೆ. ರಸ್ತೆ ದುರಸ್ತಿ, ದಾರಿ ಒತ್ತುವರಿ, ಪವತಿ ಖಾತೆ, ಸ್ಮಶಾನಕ್ಕೆ ಜಾಗ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚಾಗಿ ಬಂದಿವೆ. ನಾನೇ ಖುದ್ದು ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ.

ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಪವತಿ ಆಂದೋಲನ ನಡೆಸಲಾಗುತ್ತಿದ್ದು ಜುಲೈ ಅಂತ್ಯದಲ್ಲಿ ಜಿಲ್ಲಾ ಮಟ್ಟದ ಪವತಿ ಆಂದೋಲನ ನಡೆಯಲಿದೆ. ಸ್ಥಳೀಯ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿದರೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯೇ ಇರುವುದಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾಳಜಿಯಿಂದ ಕೆಲಸ ಮಾಡದಿದ್ದರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ರೈತರಿಗೆ ಅನುಕೂಲವಾಗಲಿ. ಅವರು ನೆಮ್ಮದಿಯಿಂದ ಇದ್ದರೆ ಇಡೀ ದೇಶವೇ ನೆಮ್ಮದಿಯಿಂದ ಬದುಕಲಿದೆ ಎಂದರು.ಸಭೆಯಲ್ಲಿ ಎಸಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ಎಡಿಸಿ ಶಿವಾನಂದ್ ಕರಾಳೆ, ನಗರಸಭಾ ಆಯುಕ್ತ ವಿಶ್ವೇಶ್ವರ ಬದರಗಡೆ, ಗ್ರಾಪಂ ಪ್ರಭಾರ ಅಧ್ಯಕ್ಷೆ ಪವಿತ್ರಾ, ಡಿವೈಎಸ್‌ಪಿ ವಿನಾಯಕಶೆಟ್ಟಗೇರಿ, ಬಿಇಒ ಚಂದ್ರಯ್ಯ, ಕೃಷಿ ಅಧಿಕಾರಿ ಚನ್ನಕೇಶವಮೂರ್ತಿ, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ, ಪಶು ಇಲಾಖೆಯ ಡಾ. ನಂದೀಶ್, ಬೆಸ್ಕಾಂ ಇಲಾಖೆ ಮನೋಹರ್, ಸಮಾಜ ಕಲ್ಯಾಣ ಇಲಾಖೆಯ ಜಲಜಾಕ್ಷಮ್ಮ, ಸಿಡಿಪಿಓ ಅಶೋಕ್, ತಾಪಂ ಇಒ ಸುದರ್ಶನ್ ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿದ್ದರು.500ಕ್ಕೂ ಹೆಚ್ಚು ವಿವಿಧ ಸಮಸ್ಯೆಗಳ ಸರಮಾಲೆ

ಜನಸ್ಪಂಧನ ಸಭೆಯಲ್ಲಿ ನೂರಾರು ಜನರು ಸಮಸ್ಯೆಗಳ ಸರಮಾಲೆಯನ್ನು ಹೊತ್ತು ತಂದಿದ್ದರು. ಕೆಲವರು ಹಲವಾರು ವರ್ಷಗಳಿಂದಲೂ ಪವತಿ ಖಾತೆ, ಪಹಣಿ ತಿದ್ದುಪಡಿ, ಇ-ಖಾತೆ ಸೇರಿದಂತೆ ಹಲವಾರು ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ನಮ್ಮನ್ನ ಅಲೆದಾಡಿಸುತ್ತಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು. ಗುಂಗರುಮಳೆ ಗ್ರಾಮದ ನಂದಿನಿ ಎಂಬ ಮಹಿಳೆ ನಮ್ಮ ಮನೆಯ ಪಹಣಿ ಬರುತ್ತಿಲ್ಲ ಎಂದು ಕಳೆದ ಐದಾರು ವರ್ಷಗಳಿಂದ ಅಲೆಯುತ್ತಿದ್ದೇನೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು. ಇನ್ನೂ ವಯಸ್ಸಾದ ಜಯರಾಂ, ಗಂಗಮ್ಮ ಎಂಬುವವರು ನಮಗೆ ವೃದ್ಧಾಪ್ಯ ವೇತನ ಬರುತ್ತಿಲ್ಲ ಎಂದು ಅರ್ಜಿ ತಂದಿದ್ದರು. ಇನ್ನೂ ಕೆಲವರು ವಿಧಾವ ವೇತನ, ಸಂದ್ಯಾ ಸುರಕ್ಷಾ ವೇತನ ಸಿಗುತ್ತಿಲ್ಲ ತಾಲೂಕು ಕಛೇರಿಗೆ ಅಲೆದು ಸಾಕಾಗಿದೆ ಎಂದು ಅಳಲನ್ನು ತೋಡಿಕೊಂಡರು. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂದಪಟ್ಟಂತೆ ಅರ್ಜಿಗಳ ಬಂದಿದ್ದವು. ರಸ್ತೆ ಮಾಡಿಸಿಕೊಡಿ, ತೋಟಗಳಿಗೆ ಹೋಗಲು ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ಚರಂಡಿಗಳನ್ನು ಸ್ವಚ್ಚತೆ ಮಾಡುತ್ತಿಲ್ಲ ಎಂದು ನೊಣವಿಕೆರೆ ಗ್ರಾ.ಪಂಗೆ ಸ್ಥಳಿಯರು ಅರ್ಜಿ ಮೂಲಕ ದೂರು ನೀಡಿದರು. ಸಮಸ್ಯೆಗಳನ್ನೇ ಹೊತ್ತು ತಂದಿದ್ದ ಜನರನ್ನು ನೋಡಿದರೆ ಅಧಿಕಾರಿಗಳು ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇಷ್ಟು ದಿನ ಏನು ಕೆಲಸ ಮಾಡುತ್ತಿದ್ದರು ಎಂಬ ಪ್ರಶ್ನೆ ಸಾರ್ವಜನಿಕರ ಬಾಯಲ್ಲಿ ಬರುತ್ತಿತ್ತು. ಕಂದಾಯ ಇಲಾಖೆಗೆ 198, ಬೆಸ್ಕಾಂ 6, ಪಿಡಿಒ 14, ಸಿಡಿಪಿಒ 1, ಕೃಷಿ 2, ಹೇಮಾವತಿ 2, ಎಡಿಎಲ್‌ಆರ್ 11, ಪಶುಪಾಲನಾ 1 ಒಟ್ಟು 235 ಅರ್ಜಿಗಳು ಬಂದಿದ್ದವು.

ವಸ್ತು ಪ್ರದರ್ಶನ: ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಸ್ಕಾಂ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪಶು ಇಲಾಖೆ, ಕೃಷಿ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇಲಾಖೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿತ್ತು.