ಸಾರಾಂಶ
ದಾಬಸ್‍ಪೇಟೆ: ಕಳೆದ 30 ವರ್ಷಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಆಡಳಿತ ನಡೆಸಿದ್ದರೂ 50 ಕೋಟಿ ವೆಚ್ಚದ ಕಾಮಗಾರಿಗೆ ಮಂತ್ರಿಗಳು ಚಾಲನೆ ನೀಡಿದ ಉದಾಹರಣೆಗಳಿಲ್ಲ. ಆದರೆ ಇದೀಗ 300 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಕ್ಕೆ ಟೀಕೆ ಮಾಡುತ್ತಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು, ನಿಮ್ಮ ಕಾಲದಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ, ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿ ಎಂದು ಶಾಸಕ ಎನ್.ಶ್ರೀನಿವಾಸ್ ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ವರ್ಷ ಮಾ. 4ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರು 869 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೀಡಿದ್ದರು. ಅಂದು ಇಂಧನ ಸಚಿವ ಜಾರ್ಜ್ ಕಾರಣಾಂತರಗಳಿಂದ ಆಗಮಿಸಿರಲಿಲ್ಲ, ಇದೀಗ ಅವರನ್ನು ಕ್ಷೇತ್ರಕ್ಕೆ ಕರೆತಂದು ದೈವಬಲದಿಂದ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ಅವರ ಅಮೃತ ಹಸ್ತದಿಂದ ಚಾಲನೆ ನೀಡಿದ್ದಾರೆ. ಆದರೆ ಬಿಜೆಪಿಯವರು ಪತ್ರಿಕಾಗೋಷ್ಠಿ ನಡೆಸಿ ಟೀಕಿಸುತ್ತಿದ್ದಾರೆ, ನಾನು ಎದೆಗುಂದುವುದಿಲ್ಲ. ಅವರು ಎಷ್ಟೇ ಟೀಕಿಸಿದರೂ ನಾನು ತಲೆ ಕೆಡಿಸಿಕೊಂಡಿಲ್ಲ, ಮುಂದೆಯೂ ಕೆಡಿಸಿಕೊಳ್ಳುವುದಿಲ್ಲ ಎಂದರು.ಸಾಕ್ಷಿ ನೀಡಿದರೆ ರಾಜೀನಾಮೆ ನೀಡಲು ಸಿದ್ದ:ಮೂರುವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ನೆಲಮಂಗಲ ಕ್ಷೇತ್ರಕ್ಕೆ ತಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಬಿಜೆಪಿ ಮುಖಂಡರು ಒಂದೇ ಒಂದು ಸಾಕ್ಷಿ ನೀಡಿದರೆ ನಾನು ರಾಜೀನಾಮೆ ನೀಡಿ ನಿಮ್ಮ ಜೊತೆಯಿರುತ್ತೇನೆ. ನಮ್ಮ ಸರ್ಕಾರದ ಸಾಧನೆಗಳನ್ನು ನಾವು ಪ್ರಚಾರ ಮಾಡಿದರೆ, ಪೂಜೆ ಮಾಡಿದರೆ ನಿಮಗ್ಯಾಕೆ ಹೊಟ್ಟೆಕಿಚ್ಚು, ಕೇಂದ್ರದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದೆ, ಈ ಕ್ಷೇತ್ರದಲ್ಲಿ ತಮ್ಮದೇ ಪಕ್ಷದವರು ಸಂಸದರಾಗಿದ್ದಾರೆ. ತಾವು ನೆಲಮಂಗಲ ಕ್ಷೇತ್ರಕ್ಕೆ ಸಂಸದರಿಂದ ಅನುದಾನ ತಂದು ಗ್ರಾಪಂ ಮಟ್ಟದಲ್ಲಿ, ಬೂತ್ ಮಟ್ಟದಲ್ಲಿ ಪ್ರತಿನಿತ್ಯ ಪೂಜೆ ಮಾಡಿದರೆ ನಾನು ಸ್ವಾಗತಿಸುತ್ತೇನೆ. ನನಗೆ ಹೊಟ್ಟೆಕಿಚ್ಚಿಲ್ಲ ನನ್ನ ಕ್ಷೇತ್ರದ ಅಭಿವೃದ್ಧಿಯಾದರೆ ಸಾಕು ಎಂದರು.