ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಬಿಡಿ

| Published : Mar 19 2025, 12:30 AM IST

ಸಾರಾಂಶ

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮಾತನಾಡಿದರು. ರೇಖಾ ರಮೇಶ್, ಶಂಕರ್, ರಾಘವೇಂದ್ರ, ಶಿವಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಿ ಖಾತಾ ವಿಚಾರದಲ್ಲಿ ಮಾಜಿ ಸಚಿವ ಎನ್.ಮಹೇಶ್ ಅವರು ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದು ಇಂತಹ ಕೆಲಸವನ್ನು ಬಿಡಬೇಕು ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿ, ಮಾಜಿ ಸಚಿವ ಎನ್.ಮಹೇಶ್ ಅವರು ಕೊಳ್ಳೇಗಾಲ ಕ್ಷೇತ್ರದಲ್ಲಿ ಈಗಾಗಲೇ ದಾರಿ ತಪ್ಪಿದ್ದಾರೆ, ತಾವು ದಾರಿ ತಪ್ಪಿದ್ದಕ್ಕಾಗಿ ಈಗ ಬಿ ಖಾತೆ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡಿದ್ದು ಅವರಿಗೆ ಅರಿವಿನ ಕೊರತೆ ಇದೆ. ಬಿ ಖಾತಾ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಯನ್ನು ನಿಲ್ಲಿಸಬೇಕು ಎಂದರು.

ಬಡವರಿಗೆ ನ್ಯಾಯ ನೀಡುವುದಕ್ಕಾಗಿ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಬಿ ಖಾತೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಒಳಿತಾಗಲಿದೆ, ಇದನ್ನು ಮಾಜಿ ಸಚಿವರು ಸರಿಯಾದ ರೀತಿ ತಿಳಿದುಕೊಳ್ಳದೆ ಗೊಂದಲ ಸೃಷ್ಟಿಸಿದ್ದಾರೆ. ಹಾಗಾಗಿ ಪಟ್ಟಣ ಹಾಗೂ ಜಿಲ್ಲೆಯ ಜನತೆ ಬಿ ಖಾತಾ ಯೋಜನೆ ಸದ್ಬಳಕೆಗೆ ಮುಂದಾಗಬೇಕು, ಇದರಿಂದಾಗಿ ನಗರದ ಅಭಿವೃದ್ಧಿ ಮತ್ತು ಬಡವರಿಗೆ ಒಳ್ಳೆಯದಾಗಲಿದೆ ಎಂದರು. ನಗರಸಭೆ ಚುನಾವಣಾ ವೇಳೆ ತಮ್ಮ ಪಕ್ಷದ ಪರವಾಗಿ ನಿಲ್ಲಿಸಲು ಅಭ್ಯರ್ಥಿಗಳೆ ಇರಲಿಲ್ಲ, ಆ ಪಕ್ಷದಿಂದ ಗೆದ್ದವರು ನಮ್ಮ ಬೆಂಬಲಕ್ಕೆ ನಿಂತರು. ಕೊಳ್ಳೇಗಾಲದ 31 ವಾರ್ಡ್‌ಗಳಲ್ಲೂ ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಶಂಕರ್ ಹಾಗೂ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮ ರೀತಿ ಕೆಲಸ, ಕಾರ್ಯ ನಡೆಯುತ್ತಿದೆ. ನಗರಸಭೆಯಲ್ಲಿ ಉತ್ತಮ ವ್ಯವಸ್ಥೆ ಇದೆ. ಹಾಗಾಗಿ ನಾಗರಿಕರು ನಗರಸಭೆಗೆ ಖುದ್ದು ಬಂದು ಬಿ ಖಾತೆ ಪಡೆದುಕೊಳ್ಳಿ, ಮೊದಲು ಅರ್ಜಿ ಸಲ್ಲಿಸಿ, ಬಿ ಖಾತಾ ಜಾರಿಯಿಂದಾಗಿ ವಯಕ್ತಿಕವಾಗಿ ನನಗೂ ಅನುಕೂಲವಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ನಾನು ಧನ್ಯವಾದ ಹೇಳುವೆ. ಮಾಜಿ ಸಚಿವರು ಇನ್ನಾದರೂ ಅರಿತು ಈ ಸಂಬಂಧ ಹೇಳಿಕೆ ನೀಡಲಿ ಎಂದರು.

ಬಿ ಖಾತೆ ವಿಚಾರದಲ್ಲಿರುವ ಗೊಂದಲಗಳನ್ನು ಸಾರ್ವಜಕರ ಸಮ್ಮುಖದಲ್ಲಿ ಅರಿವು ಮೂಡಿಸಿ ಗೊಂದಲ ನಿವಾರಿಸುವ ಸಂಬಂಧ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಶೀಘ್ರದಲ್ಲಿ ಬಿ ಖಾತಾ ಆಂದೋಲನ ಅರಿವು ಆಯೋಜಿಸಲಾಗುವುದು. ಸಾರ್ವಜನಿಕರು ಮಾಜಿ ಸಚಿವರ ಮಾತಿಗೆ ಮನ್ನಣೆ ನೀಡಬಾರದು. ಬಿ ಖಾತಾ ಸದ್ಬಳಕೆಗೆ ಮುಂದಾಗಬೇಕು ಎಂದರು. ಈ ವೇಳೆ ನಗರಸಭೆ ಅಧ್ಯಕ್ಷ ರೇಖಾ, ಎಪಿ ಶಂಕರ್, ಜಿಎಂ ಸುರೇಶ್, ಮಂಜುನಾಥ್, ರಾಘವೇಂದ್ರ, ರಮೇಶ್, ಜಿಪಿ ಶಿವಕುಮಾರ್, ಶಂಕನಪುರ ಪ್ರಕಾಶ್, ಶಂಕನಪುರ ಜಗದೀಶ ಇನ್ನಿತರರಿದ್ದರು.