ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಪ್ರತಿ ವಿದ್ಯಾರ್ಥಿಯಲ್ಲಿ ಅದಮ್ಯ ಶಕ್ತಿ ಇರುತ್ತದೆ. ತಮ್ಮ ಮೇಲೆ ತಮಗೆ ಆತ್ಮವಿಶ್ವಾಸವಿರಬೇಕು. ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡದೇ ಸಕಾರಾತ್ಮಕ ಚಿಂತನೆಯುತ್ತ ಮನಸ್ಸು ಹರಿಸಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ.ಪಾಟೀಲ ಹೇಳಿದರು.ಜಿಪಂ, ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ), ಪಂಚಾಯತ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ವತಿಯಿಂದ ವಿವೇಕ ಶಾಲಾ ಯೋಜನೆ ಅನುದಾನದಡಿಯಲ್ಲಿ ಸಿ.ಎನ್.ಎನ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಂದಾಜು ₹42 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ, ₹1.40 ಕೋಟಿ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹೆಚ್ಚುವರಿ ಕಟ್ಟಡ(ಆಡಿಟೋರಿಯಂ) ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ
ಅವರು ಮಾತನಾಡಿದರು.ವಿದ್ಯಾರ್ಥಿಗಳು ಒತ್ತಡದಿಂದ ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದುವ ವಾತಾವರಣವನ್ನು ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ನಿರ್ಮಿಸಬೇಕು. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಮಹತ್ವ ನೀಡದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಳ್ಳುವ ಮೂಲಕ ರಾಜ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ವ್ಯಕ್ತಿಗಳು ನೀವಾಗಬೇಕು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ಅಜ್ಜು ಬಾಯಿಸರ್ಕಾರ, ಡಾ.ಎಸ್.ಎಚ್.ತೆಕ್ಕೆನ್ನವರ, ಶ್ರೀಶೈಲ ಅಂಟೀನ, ಸಂಗಪ್ಪ ಕಂದಗಲ್ಲ, ಪ್ರಾಚಾರ್ಯ ಎಸ್.ಎಚ್.ನಾರಾಯಣಿ, ಪಿ.ಬಿ.ಬಡಿಗೇರ ಹಾಗೂ ಜ್ಯೋತಿಬಾ ಅವತಾಡೆ, ರಾಜು ಬೋರ್ಜಿ,ಸಿದ್ದು ಸಾರಾವರಿ, ಸಿದ್ದು ಮೇಟಿ, ಸಂತೋಷ ಕೋಲ್ಹಾರ, ಲಕ್ಷ್ಮಣ ತೋಟದ, ಸಿಕಂದರ ಹುದ್ದಾರ, ರವಿ ನಾಗನಗೌಡರ, ಶಿವಾಜಿ ಚವ್ಹಾಣ, ಮನೋಜ ಹಾದಿಮನಿ, ಚಿನ್ನಪ್ಪ ಬಂಡಿವಡ್ಡರ ಇದ್ದರು.-
ಕೋಟ್ಸಿ.ಎನ್.ಎನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಎರಡು ಸ್ಮಾರ್ಟ್ ಕ್ಲಾಸ್ ಹಾಗೂ ಮೂರು ಕಂಪ್ಯೂಟರ್ ನೀಡುವುದರ ಜತೆಗೆ ರಸ್ತೆ ಹಾಗೂ ಮೂಲಭೂತ ಸೌಲಭ್ಯಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು.
-ಜೆ.ಟಿ.ಪಾಟೀಲ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ