ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳ ರದ್ದುಪಡಿಸುವಂತೆ ಒತ್ತಾಯಿಸಿ, ದೆಹಲಿ ಹಾಗೂ ಸುತ್ತುಮುತ್ತಲಿನ ರಾಜ್ಯಗಳ ಗಡಿಗಳಲ್ಲಿ ರೈತರ ಮೇಲಿನ ಸೇನೆ-ಪೊಲೀಸ್ ದಬ್ಬಾಳಿಕೆ ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಸಮಿತಿ ಜಿಲ್ಲಾ ಘಟಕಗಳಿಂದ ತಾಲೂಕಿನ ಆನಗೋಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟಿಸಲಾಯಿತು.ತಾಲೂಕಿನ ಆನಗೋಡು ಗ್ರಾಮದ ಗ್ರಾಪಂ ಕಚೇರಿ ಎದುರು ಉಭಯ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು, ಕಾರ್ಮಿಕರು, ರೈತರಿಗೆ ಮಾರಕವಾದ ಹಾಗೂ ಬಂಡವಾಳ ಶಾಹಿಗಳಿಗೆ ಪೂರಕವಾಗಿರುವ ಮೂರೂ ಕೃಷಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳ ಕೂಗಿ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಗಳ ಸಮಿತಿ ಮುಖಂಡ ಆವರಗೆರೆ ಎಚ್.ಜಿ.ಉಮೇಶ, ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಪೋರೇಟ್ ಪರ ಹಾಗೂ ರೈತ ವಿರೋಧಿಯಾದ ಕೃಷಿ ಕಾಯ್ದೆಗಳ ರದ್ದುಪಡಿಸಬೇಕು. ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ವರದಿ, ಶಿಫಾರಸ್ಸಿನಂತೆ ಸೂತ್ರ C2+50% ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತರಿ ಒದಗಿಸುವ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುತ್ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು. ರೈತರ ಆತ್ಮಹತ್ಯೆ ತಡೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ 26 ಸಾವಿರ ರು.ಗಳಿಗೆ ನಿಗದಿಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಕಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಕಾಯಂಗೊಳಿಸಲು ಶಾಸನ ರೂಪಿಸಬೇಕು. ನಾಲ್ಕೂ ಕಾರ್ಮಿಕ ಸಂಹಿತೆಗಳ, ಎಫ್‌ಟಿಐ ಪದ್ಧತಿ ಹಾಗೂ ಕೆಲಸದ ಅವಧಿ ಹೆಚ್ಚಿಸುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯ್ದೆ 2006, ಕಾರ್ಪೋರೇಟ್ ಸ್ನೇಹಿತ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2023 ಹಾಗೂ ಜೀವ ವೈವಿಧ್ಯ ಕಾಯ್ದೆ ರದ್ದುಪಡಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕು ಖಾತರಿಪಡಿಸಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಿ, ಪರಿಹಾರ ಕ್ರಮ ವೈಜ್ಞಾನಿಕವಾಗಿ, ರೈತ ಸ್ನೇಹಿಯಾಗಿಸಬೇಕು. ಬಗರ್ ಹುಕುಂ ಸಾಗುವಳಿದಾರರು ಸೇರಿ ಎಲ್ಲಾ ಉಳುಮೆ ಮಾಡುವ ರೈತರಿಗೆ ಭೂಮಿ ಹಕ್ಕನ್ನು ಖಾತರಿಪಡಿಸಬೇಕು ಎಂದು ಆವರಗೆರೆ ಉಮೇಶ ಮನವಿ ಮಾಡಿದರು.ಸಂಘಟನೆ ಮುಖಂಡ ಮಧು ತೊಗಲೇರಿ ಮಾತನಾಡಿ, ರೈತರ ಶಾಂತಿಯುತ ಹೋರಾಟದ ಮೇಲೆ ಪೊಲೀಸ್, ಸಶಸ್ತ್ರ ಭದ್ರತಾ ಪಡೆಗಳ ಛೂ ಬಿಟ್ಟಿರುವುದಲ್ಲದೇ ಲಾಠಿ ಪ್ರಹಾರ, ಟಿಯರ್ ಗ್ಯಾಸ್, ರಬ್ಬರ್ ಬುಲೆಟ್ ಸಿಡಿಸುವಂತಹ ಪೈಶಾಚಿಕ ಕೃತ್ಯವನ್ನು ರೈತರ ಮೇಲೆ ಎಸಗುತ್ತಿರುವುದು ದುರಂತ. ಮಲಗಿದ್ದ ರೈತರ ಮೇಲೆ ನಡು ರಾತ್ರಿ ಡ್ರೋನ್ ಮೂಲಕ ಅಶ್ರುವಾಯು ಶೆಲ್‌ಗಳ ಸುರಿ ಮಳೆ ಸುರಿಸಿದ್ದು ಆಘಾತಕಾರಿ ಘಟನೆ ಎಂದು ಆರೋಪಿಸಿದರು.
ರೈತ, ಕಾರ್ಮಿಕ ಮುಖಂಡರಾದ ಕೆ.ಎಚ್.ಆನಂದರಾಜ, ಹೊನ್ನೂರು ಮುನಿಯಪ್ಪ, ಭೀಮಪ್ಪ, ಐರಣಿ ಚಂದ್ರು, ತಿಪ್ಪೇಸ್ವಾಮಿ ಅಣಬೇರು, ಪರಶುರಾಮ, ಗುಮ್ಮನೂರು ಬಸವರಾಜ ಸೇರಿ ರೈತರು, ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.