ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಪ್ರತಿಭಾವಂತ ಮಾದಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬೇರೆ ಬೇರೆ ಜಾತಿಯವರನ್ನು ತಂದು ಪರಿಶಿಷ್ಟ ಜಾತಿಗೆ ಸೇರಿಸಿದ ಮೇಲೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕಿತ್ತು. ಅದನ್ನು ಬಿಟ್ಟು ಕೇಂದ್ರದ ಕಡೆ ಕೈ ತೋರಿಸುವುದು ಸರಿಯಲ್ಲ. ಕಾಂಗ್ರೆಸ್‍ನಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಕಿಡಿ ಕಾರಿದರು.ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಜಿಲ್ಲಾ ಶಾಖೆಯಿಂದ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ಪ್ರತಿಭಾನ್ವಿತ ಮಾದಿಗ ವಿದ್ಯಾರ್ಥಿಗಳಿಗೆ ಶಿವಶರಣ ಮಾದಾರ ಚನ್ನಯ್ಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.1950ರಲ್ಲಿ ಮೊಟ್ಟ ಮೊದಲು ಮೀಸಲಾತಿ ಜಾರಿಯಾದಾಗ ಎಸ್ಸಿಯಲ್ಲಿ ಆರು, ಎಸ್ಟಿಯಲ್ಲಿ ಆರು ಜಾತಿಗಳಿದ್ದವು. ಈಗ ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳಿವೆ. ಜಾತಿ ಸೇರಿಸಿ ಸಂಖ್ಯೆಯನ್ನು ಹೆಚ್ಚಿಸುವುದು ಮುಖ್ಯವಲ್ಲ. ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ಓಬಿಸಿಗೆ ಮೀಸಲಾತಿ ಕೊಟ್ಟಿದೆ. ನಮಗೇಕಿಲ್ಲ ಬೇರೆ ಬೇರೆ ಜಾತಿಯವರನ್ನು ತಂದು ಎಸ್ಸಿಗೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು?
ಹಿರಿಯ ಅನುಭವಿ ರಾಜಕಾರಣಿ ಕೆ.ಎಚ್.ಮುನಿಯಪ್ಪನವರಿಗೆ ಆಹಾರ ಖಾತೆ ನೀಡಿರುವುದು ಯಾವ ನ್ಯಾಯ? ಬಿಸಾಡಿ ಹೊರ ಬನ್ನಿ ಎಂದು ಹೇಳಿದ್ದೇನೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲಿ ಸಾಕು. ಯಾರು ಒಳ ಸಂಚು ಮಾಡುತ್ತಿದ್ದಾರೆ. ಯಾರಿಂದ ಅನ್ಯಾಯವಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಯಾರ ಹೆಸರನ್ನು ಹೇಳದೆ ವೇದಿಕೆ ಮೇಲಿದ್ದವರಿಗೆ ಕುಟುಕಿದರು.ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಾಹ್ಮಣರು ಕೇಳದಿದ್ದರೂ ಈ ದೇಶದ ಪ್ರಧಾನಿ ಮೋದಿರವರು ಶೇ.10ರಷ್ಟು ಮೀಸಲಾತಿ ಕೊಟ್ಟರು. ಆಗ ತಿದ್ದುಪಡಿ ಮಾಡಲು ಆಯಿತು. ಮಾದಿಗರಿಗೆ ಏಕೆ ಮಾಡಲಿಲ್ಲ? ಮಕ್ಕಳಿಗೆ ಅಂಕ ಮುಖ್ಯವಲ್ಲ. ಸಂಸ್ಕಾರ ಮುಖ್ಯ ಎಂದು ಎಲ್ಲರೂ ಹೇಳಿದ್ದೇ ಹೇಳುತ್ತಿರುತ್ತಾರೆ ಸರ್ಕಾರಿ ನೌಕರಿಗೆ ಹೋಗಬೇಕಾದರೆ
ಒಂದೊಂದು ಅಂಕಕ್ಕೂ ಬೆಲೆಯಿದೆ. ಹಾಗಾಗಿ ಮಕ್ಕಳಿಗೆ ಅಂಕವೇ ಪ್ರಧಾನವಾಗಬೇಕು. ರಾಜ್ಯದಲ್ಲಿ ಮಲ ಹೊರುವ 45 ಸಾವಿರ ಪೌರ ಕಾರ್ಮಿಕರಿದ್ದಾರೆ. ಅವರೇ ನಿಜವಾದ ಮಾದಿಗರು. ಹಾಗಾಗಿ ಒಳ ಮೀಸಲಾತಿ ಬೇಕು. ಶಿಕ್ಷಣ ನೌಕರಿಯಲ್ಲಿ ಮೀಸಲಾತಿ ಸಿಕ್ಕರೆ ಸಾಲದು. ಆರ್ಥಿಕವಾಗಿ ಮೀಸಲಾತಿ ದೊರೆಯಬೇಕು. ಆಗ 39 ಇಲಾಖೆಯಲ್ಲಿರುವ ಮಾದಿಗ ನೌಕರರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿರುವ 38 ಎಂಎಲ್‍ಎಗಳಲ್ಲಿ 33 ಶಾಸಕರು ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಈಗಾದರೆ ಮಾದಿಗರ ಗತಿಯೇನು ಎಂದು ಪ್ರಶ್ನಿಸಿದರು?ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು. ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಮಾದಿಗ ನೌಕರರ ಸಂಘದ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಜಾಂಚಿ ಬಿ.ರುದ್ರಮುನಿ, ಉಪಾಧ್ಯಕ್ಷರುಗಳಾದ ಜೆ.ಸಿದ್ದಲಿಂಗಮ್ಮ, ಆರ್.ಜಿ.ನಾಗರಾಜ್, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರೇಮನಾಥ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.