ಸಾರಾಂಶ
ಗೃಹ ಬಳಕೆ ಸಿಲಿಂಡರ್ ದರ ಏರಿಕೆ ಮತ್ತು ಡಿಸೇಲ್ ಮೇಲಿನ ಸುಂಕ ಹೆಚ್ಚಳ ವಿರೋಧಿಸಿ ನಗರದಲ್ಲಿ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
- ಸಿಲಿಂಡರ್ ದರ ಏರಿಕೆ, ಡೀಸೆಲ್ ಸುಂಕ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗೃಹ ಬಳಕೆ ಸಿಲಿಂಡರ್ ದರ ಏರಿಕೆ ಮತ್ತು ಡಿಸೇಲ್ ಮೇಲಿನ ಸುಂಕ ಹೆಚ್ಚಳ ವಿರೋಧಿಸಿ ನಗರದಲ್ಲಿ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಜಯದೇವ ವೃತ್ತದಲ್ಲಿ ಎತ್ತಿನ ಬಂಡಿಯಲ್ಲಿ ಖಾಲಿ ಸಿಲಿಂಡರ್ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬೆಲೆ ಏರಿಕೆ ನಿಲ್ಲಿಸಿ, ಜನರ ಬದುಕು ಉಳಿಸಿ ಎಂದು ಆಗ್ರಹಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ವರುಣ್ ಮಾತನಾಡಿ, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆಯ ಲಾಭವನ್ನು ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ವರ್ಗಾಯಿಸಬೇಕಿತ್ತು. ಆದರೆ, ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿ, ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.ಕಚ್ಚಾ ತೈಲದ ಬೆಲೆ ಕುಸಿತದ ಕಾರಣದಿಂದ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹2 ಇಳಿಕೆಯಾಗಿದೆ. ಈ ಬೆಲೆ ಕುಸಿತದ ಲಾಭವನ್ನು ಜನಸಾಮಾನ್ಯರಿಗೆ ವರ್ಗಾಯಿಸಲು ಮೋದಿ ಅವರಿಗೆ ಇಷ್ಟವಿಲ್ಲ. ಹೀಗಾಗಿ ಎರಡೂ ಇಂಧನಗಳ ಮೇಲೆ ₹2ರಷ್ಟು ಅಬಕಾರಿ ಸುಂಕ ಹೆಚ್ಚಿಸಿದ್ದಾರೆ ಎಂದರು.
ಮೋದಿ ಅವರ ತಮ್ಮ ಸರ್ಕಾರದ ಆದಾಯ ಸಂಗ್ರಹಕ್ಕಷ್ಟೇ ಆದ್ಯತೆ ನೀಡುತ್ತಾರೆ. ಹಲವು ವರ್ಷಗಳಿಂದ ಹೀಗೇ ಮಾಡುತ್ತಿದ್ದು, ಕಚ್ಚಾತೈಲ ಬೆಲೆ ಇಳಿಕೆಯ ಲಾಭವು ಜನಸಾಮಾನ್ಯರಿಗೆ ಸಿಗದಂತೆ ಮಾಡಿದ್ದಾರೆ. ಅವರ ವಿಫಲ ಆರ್ಥಿಕ ನೀತಿಗಳ ಕಾರಣದಿಂದ ದೇಶದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚಾಗಿದೆ. ಎಲ್ಲ ಬೆಲೆ ಏರಿಕೆಗಳ ನಡುವೆ ಈಗ ಎಲ್‌ಪಿಜಿ ಸಿಲಿಂಡರ್ ಬೆಲೆ ಸಹ ಹೆಚ್ಚಳ ಮಾಡಿ, ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಹೇಳಿದರು.ನಗರಸಭೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- - --9ಕೆಡಿವಿಜಿ51.ಜೆಪಿಜಿ:
ದಾವಣಗೆರೆಯಲ್ಲಿ ಗೃಹ ಬಳಕೆ ಸಿಲಿಂಡರ್ ದರ ಏರಿಕೆ, ಡೀಸೆಲ್ ಮೇಲಿನ ಸುಂಕ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.