ಸಾರಾಂಶ
- ಮೌಢ್ಯಾಚರಣೆ, ಜೂಜು ಅಡ್ಡೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಮುಖಂಡರ ಮನವಿ - - -
ಕನ್ನಡಪ್ರಭ ವಾರ್ತೆ ಹರಿಹರಮಾರ್ಚ್ 18ರಿಂದ 22ರವರೆಗೆ ನಡೆಯುವ ನಗರದ ಗ್ರಾಮದೇವತೆ ಮಹೋತ್ಸವದಲ್ಲಿ ಅರೆಬೆತ್ತಲೆ ಬೇವಿನ ಉಡುಗೆ ತೊಡುವುದು, ಕೋಣ ಬಲಿ ನೀಡುವಂತಹ ಮೌಢ್ಯಾಚರಣೆಗಳು ಹಾಗೂ ಜೂಜು ಅಡ್ಡೆಗಳ ದಂಧೆಗಳನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ತಹಸೀಲ್ದಾರ್‌ಗೆ ಮನವಿ ನೀಡಲಾಯಿತು.
ಕದಸಂಸ ತಾಲೂಕು ಅಧ್ಯಕ್ಷ ಮಂಜುನಾಥ ಎಂ. ಈ ಸಂದರ್ಭ ಮಾತನಾಡಿ, 3 ವರ್ಷಕ್ಕೊಮ್ಮೆ ಆಚರಿಸುವ ಉತ್ಸವದಲ್ಲಿ ಕೋಣ ಬಲಿ, ಅರೆ ಬೆತ್ತಲೆ ಬೇವಿನ ಉಡುಗೆ ಹಾಗೂ ಮನೋರಂಜನೆಯ ಹೆಸರಲ್ಲಿ ಜೂಜು ಆಡಿಸುವ ಸಮಾಜ ವಿರೋಧಿ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತವೆ ಎಂದರು.ಈ ಹಿಂದೆ ಚಂದ್ರಗುತ್ತಿ ಉತ್ಸವದಲ್ಲಿ ದಲಿತ, ಹಿಂದುಳಿದ ವರ್ಗದ ಮಹಿಳೆಯರಿಂದ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನು ತಡೆಯಲು ಹರಿಹರದವರೇ ಆದ ದಸಂಸ ಸ್ಥಾಪಕ ದಿ।। ಪ್ರೊ.ಬಿ.ಕೃಷ್ಣಪ್ಪ ದೊಡ್ಡ ಆಂದೋಲನ ರೂಪಿಸಿ ಯಶಸ್ಸನ್ನು ಕಂಡಿದ್ದರು. ಅವರ ಹುಟ್ಟೂರಲ್ಲಿ ಉತ್ಸವದ ಹೆಸರಲ್ಲಿ ಅರೆಬೆತ್ತಲೆ ಬೇವಿನ ಉಡುಗೆ ತೊಡುವ ಮೌಢ್ಯತೆ ನಡೆಯುತ್ತಿರುವುದನ್ನು ಸಹಿಸಲಾಗದು. ಪ್ರತಿ ಉತ್ಸವದ ಸಂದರ್ಭ ಪೊಲೀಸರು ಯಾವುದೋ ಕೋಣ ಹಿಡಿದು ಬಲಿ ತಡೆಯಲಾಗಿದೆ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಹಲವು ಕೋಣಗಳ ಬಲಿ ರಾಜಾರೋಷವಾಗಿ ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.
ಉತ್ಸವ ವೇಳೆ ಮನೋರಂಜನೆ ಹೆಸರಲ್ಲಿ ಆಯಕಟ್ಟಿನ ಜಾಗಗಳಲ್ಲಿ 20ಕ್ಕೂ ಹೆಚ್ಚು ಜೂಜು ಅಡ್ಡೆಗಳನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪ್ರಭಾವಿ ವ್ಯಕ್ತಿಗಳು ಸಂಬಂಧಿತ ಇಲಾಖಾಧಿಕಾರಿಗಳ ಮನವೊಲಿಸುವ ಕೆಲಸ ಮಾಡಿದ್ದಾರೆಂದು ತಿಳಿದುಬಂದಿದೆ. ಜೂಜಾಟದಲ್ಲಿ ಹಣ ಸೋತವರು ಜಿಗುಪ್ಸೆಗೊಂಡು ಆತ್ಮಹತ್ಯೆ ದಾರಿಹಿಡಿಯುತ್ತಾರೆ. ಆಗ ಅವರ ಕುಟುಂಬದವರು ಬೀದಿಪಾಲಾಗುತ್ತಾರೆ. ಉತ್ಸವದ ಹೆಸರಲ್ಲಿ ನಡೆಯುವ ಮೌಢ್ಯಾಚರಣೆಗಳು ಹಾಗೂ ಜೂಜಾಟವನ್ನು ತಾಲೂಕು, ಜಿಲ್ಲಾಡಳಿತ ಹಾಗೂ ಪೊಲೀಸರು ತಡೆಬೇಕು. ಈ ಬಾರಿಯೂ ಅನಿಷ್ಟ ಪದ್ಧತಿಗಳು ಮುಂದುವರಿದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಶತಸಿದ್ಧ ಎಂದು ಎಚ್ಚರಿಸಿದರು.ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆ ಪದಾಧಿಕಾರಿಗಳಾದ ಶಿವಕುಮಾರ್, ರಮೇಸ್ ಮಾಳಗಿ, ರಮೇಶ್ ಎಂ., ಓಂಪ್ರಕಾಶ್, ಕುಮಾರ್ ಎ., ಧನರಾಜ್, ಗಣೇಶ್ ಆರ್., ವಿಶಾಲ್ ಎ. ಇದ್ದರು.
- - - -14ಎಚ್‍ಆರ್‍ಆರ್04:ಹರಿಹರದ ಗ್ರಾಮದೇವತೆ ಉತ್ಸವವನ್ನು ಮೌಢ್ಯರಹಿತ ಹಾಗೂ ಜೂಜಾಟ ಇಲ್ಲದೇ ನಡೆಸಲು ಕ್ರಮ ಕೈಗೊಳ್ಳಲು ಆಗ್ರಹಿಸಿ ಕದಸಂಸ ಕಾರ್ಯಕರ್ತರು ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಿದರು.