ಸಾರಾಂಶ
ಗಜೇಂದ್ರಗಡ: ರಾಜೂರು ಗ್ರಾಪಂ ವ್ಯಾಪ್ತಿಯ ಭೈರಾಪೂರ ಗ್ರಾಮದಲ್ಲಿ ನಿವೇಶನ ಮತ್ತು ಭೂಮಿ ಅಳೆಯುವ ಕಾರ್ಯಕ್ಕೆ ತಕರಾರಿದ್ದು, ಅಧಿಕಾರಿಗಳು ಸರ್ವೆ ಕಾರ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್‌ಗೆ ಬುಧವಾರ ಭೈರಾಪೂರ ಗ್ರಾಮಸ್ಥರು ಮನವಿ ನೀಡಿದರು.
ಭೈರಾಪೂರ ಗ್ರಾಮದಲ್ಲಿ ಒರ್ವ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ ಜಮೀನು ಹಿಡಿದಿದ್ದಾರೆ ಎಂಬ ಚರ್ಚೆಗಳಿರುವಾಗ ಗ್ರಾಮದಲ್ಲಿ ಗ್ರಾಪಂ ಹಾಗೂ ಕಂದಾಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಕೇಳಿದರೆ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಪರಿಣಾಮ ಗ್ರಾಮದಲ್ಲಿನ ಸರ್ವೇ ಕಾರ್ಯದಿಂದ ನಾವಿರುವ ನಿವೇಶನ ಮತ್ತು ನಮ್ಮ ಜಮೀನಿನ ಬಗ್ಗೆಅನೇಕ ಗೊಂದಲ ಸೃಷ್ಠಿಯಾಗಿದೆ ಎಂದ ದೂರಿದ ಗ್ರಾಮಸ್ಥರು, ಕಳೆದ ಕೆಲ ತಲೆಮಾರುಗಳಿಂದ ನಾವು ಭೈರಾಪೂರ ಗ್ರಾಮದಲ್ಲಿ ಬದುಕು ಕಟ್ಟಿಕೊಂಡಿದ್ದು ಅದಕ್ಕೆ ಪೂರಕವಾದ ನಮ್ಮ ಮನೆಯ ಅಳತೆ, ಉತಾರ ಸೇರಿ ಇತರ ದಾಖಲೆಗಳು ರಾಜೂರು ಗ್ರಾಪಂನಲ್ಲಿವೆ. ಆದರೆ ಅಧಿಕಾರಿಗಳು ಕಂದಾಯ ಗ್ರಾಮ ಮಾಡುತ್ತೇವೆ ಎಂದು ಸರ್ವೆ ಕಾರ್ಯಕ್ಕೆ ನಡೆಸುತ್ತಿದ್ದು, ಸರ್ವೆ ಬಳಿಕ ನೀಡುವ ಅಳತೆ ಹಾಗೂ ಗ್ರಾಪಂನಲ್ಲಿನ ದಾಖಲೆಗಳಲ್ಲಿ ವ್ಯತ್ಯಾಸವಾದರೆ ಹೊಸ ಸಮಸ್ಯೆ ಸೃಷ್ಠಿಯಾಗಲಿದೆ ಎಂದರು.
ನಮ್ಮನ್ನಾಳುವ ಆಡಳಿತ ಹಾಗೂ ಸರ್ಕಾರಗಳು ನೆಮ್ಮದಿಯ ಜೀವನ ಕಲ್ಪಿಸಲು ಮುಂದಾಗಬೇಕು. ಆದರೆ ತಾಲೂಕಿನಲ್ಲಿನ ವ್ಯವಸ್ಥೆ ವಿರುದ್ಧವಾಗಿರುವಂತೆ ಕಾಣುತ್ತಿದೆ.ನಾವೆಲ್ಲ ಬದುಕು ಕಟ್ಟಿಕೊಂಡಿರುವ ಜಮೀನಿನ ಹಕ್ಕು ಪತ್ರ ಕೊಡುವುದರ ಜತೆಗೆ ನಾವು ವಾಸಿಸುವ ಮನೆಗಳು ಅರಣ್ಯ ಭೂಮಿ, ಕಂದಾಯ ಭೂಮಿಯಾ ಅಥವಾ ಯಾರ ಮಾಲಿಕತ್ವಕ್ಕೆ ಸೇರಿದ್ದು ತಿಳಿದಿಲ್ಲ. ಗ್ರಾಮದಲ್ಲಿ ಸರ್ವೆ ಕಾಯಕ್ಕೆ ಮುಂದಾಗುವ ಮೂಲಕ ಗ್ರಾಮಸ್ಥರನ್ನು ಒಕ್ಕಲ್ಲೆಬ್ಬಿಸುವ ಹುನ್ನಾರ ನಡೆದಿದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ. ಏಕೆಂದರೆ ಒರ್ವ ವ್ಯಕ್ತಿಯು ಗ್ರಾಮದಲ್ಲಿ ಸಾಕಷ್ಟು ಜಮೀನುನ್ನು ಖರೀದಿ ಮಾಡಿದ್ದಾರೆ. ಹೀಗಾಗಿ ಜಮೀನು ಖರೀದಿಸಿದ ಮಾಲಿಕರಿಂದ ತೊಂದರೆ ಇದ್ದು, ತಕ್ಷಣವೇ ಸರ್ವೆ ಕಾರ್ಯ ನಿಲ್ಲಿಸಲು ಅಧಿಕಾರಿಗಳಿಗೆ ಆಡಳಿತ ಸೂಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಮನವಿ ಸ್ವೀಕರಿಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಭೈರಾಪೂರ ಗ್ರಾಮದಲ್ಲಿ ನಡೆಯುತ್ತಿರುವ ಸರ್ವೆಗೆ ಗ್ರಾಮಸ್ಥರು ಸಹಕಾರ ನೀಡಬೇಕು. ಕಂದಾಯ ಗ್ರಾಮ ಆಗುವದರಿಂದ ನಿಮಗೆ ಲಾಭವಾಗಲಿದೆ ಹೊರತು ನಷ್ಟವಾಗುವದಿಲ್ಲ. ಅಲ್ಲದೆ ಗ್ರಾಮಸ್ಥರ ಮಾಲಿಕತ್ವದ ದಾಖಲೆಗಳು ರಾಜೂರು ಗ್ರಾಪಂನಲ್ಲಿ ಲಭ್ಯವಾಗಲಿವೆ. ಹೀಗಾಗಿ ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆದರೆ ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ನಮ್ಮ ತಕರಾರು ಇದೆ ಎಂದು ಪುನರುಚ್ಚರಿಸಿ ತೆರಳಿದರು.
ಗ್ರಾಪಂ ಸದಸ್ಯ ಯಮನೂರಪ್ಪ ಜೊಳ್ಳಿಯವರ, ಕಳಕಪ್ಪ ಮಾಗಿ, ಶರಣಪ್ಪ ಹೊಸಮನಿ, ಚನ್ನಬಸಪ್ಪ ಪೂಜಾರ, ಹೊಳಿಯಪ್ಪ ಜೊಳ್ಳಿಯವರ, ಮಾಂತೇಶ ಗರೇಬಾಳ, ಶಿವಪ್ಪ ಮಾಗಿ, ಕೆ.ಜಿ.ಬಾದಿಮನಾಳ, ಮುಕುಂದಪ್ಪ ಪೂಜಾರ, ಶರಣಪ್ಪ ಗಾನದಾಳ, ಹನಮಂತಪ್ಪ ಮಾಗಿ, ದುರಗಪ್ಪ ಹೊಸಮನಿ, ಬೊಮ್ಮಪ್ಪ ಕಾಟಾಪೂರ, ಮಂಜುನಾಥ ಗಾನದಾಳ ಸೇರಿ ಇತರರು ಇದ್ದರು.