ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಿರಿ!

| Published : May 08 2025, 12:37 AM IST

ಸಾರಾಂಶ

ಮೇಯರ್‌ ರಾಮಪ್ಪ ಬಡಿಗೇರ್‌, ಹು-ಧಾ ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಟೋ ಟಿಪ್ಪರ್‌ಗಳ ಕೊರತೆ ಇದೆ. ಆದರೆ ಶೀಘ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 66 ಹೊಸ ಆಟೋ ಟಿಪ್ಪರ್‌ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಕಸ ಸಂಗ್ರಹ ಪರಿಸ್ಥಿತಿ ಸುಧಾರಿಸಲಿದೆ

ಹುಬ್ಬಳ್ಳಿ: ನಗರದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲುವುದರ ವಿರುದ್ಧ ಹು- ಧಾ ಮಹಾನಗರ ಪಾಲಿಕೆ ವಲಯ ಎಲ್ಲ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಮಹಾನಗರ ಪಾಲಿಕೆ ಮೇಯರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಮೇಯರ್ ಪೋನ್‌ ಇನ್ ಕಾರ್ಯಕ್ರಮದಲ್ಲಿ, ತ್ಯಾಜ್ಯ ನಿರ್ವಹಣೆ, ಎಲ್ಲೆಂದರಲ್ಲಿ ಕಸ ಚೆಲ್ಲುವುದರ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದವು. ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಪೋನ್‌ ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಕರೆಗಳಲ್ಲಿ 32 ದೂರುಗಳಲ್ಲಿ ಹೆಚ್ಚಾಗಿ ಕಸ ಹಾಗೂ ಯುಜಿಡಿಗೆ ಸಂಬಂಧಿಸಿದ್ದವು.

ರಸ್ತೆ ಬದಿಯಲ್ಲಿ ಕಸ ಸುರಿಯದಂತೆ ನಾಗರಿಕರಲ್ಲಿ ಸರಿಯಾದ ಜಗೃತಿ ಮೂಡಿಸಬೇಕು. ಹೋಟೆಲ್‌ಗಳು ಸೇರಿದಂತೆ ಕಸ ಹಾಕುವ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡಬೇಕು. ಅಗತ್ಯ ಬಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೇಯರ್‌ ರಾಮಪ್ಪ ಬಡಿಗೇರ್‌, ಹು-ಧಾ ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಟೋ ಟಿಪ್ಪರ್‌ಗಳ ಕೊರತೆ ಇದೆ. ಆದರೆ ಶೀಘ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 66 ಹೊಸ ಆಟೋ ಟಿಪ್ಪರ್‌ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಕಸ ಸಂಗ್ರಹ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.

ಈ ಹಿಂದೆ ಮಾಡಿದ ನಾಲ್ಕು ಪೋನ್‌-ಇನ್ ಕಾರ್ಯಕ್ರಮಗಳಲ್ಲಿ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ 29 ಪ್ರಮುಖ ಸಿವಿಲ್ ಕಾಮಗಾರಿಗಳನ್ನು 4.92 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಮಾತನಾಡಿ, ಅವಳಿನಗರಗಳಿಗೆ ತ್ಯಾಜ್ಯ ಸಂಗ್ರಹಿಸಲು 420 ಆಟೋ-ಟಿಪ್ಪರಗಳ ಅಗತ್ಯವಿದೆ. ಆದರೆ ಕೇವಲ 282 ವಾಹನಗಳಿವೆ. ತ್ಯಾಜ್ಯ ಸಂಗ್ರಹವನ್ನು ಸುಧಾರಿಸಲು 66 ಹೊಸ ಆಟೋ-ಟಿಪ್ಪರಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯ ಜಿಐಎಸ್ ಸರ್ವೇ ಮೂಲಕ ಆಸ್ತಿಗಳ ಸರ್ವೇ ಮಾಡಲಾಗುತ್ತಿದೆ. ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಸ ಸಂಗ್ರಹ, ಯುಜಿಡಿ, ಗಟಾರ ಸ್ವಚ್ಛತೆ, ಒಳಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮೇಯರ್‌ಗೆ ಕರೆಮಾಡಿ ದೂರಿದರು. ಇವುಗಳ ತಕ್ಷಣ ಪರಿಹರಿಸಲು ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿವಿಧ ವಿಭಾಗಗಳ ಅಧಿಕಾರಿ ವರ್ಗ ಇತ್ತು.

ಕನ್ನಡಪ್ರಭ ಪತ್ರಿಕೆಯೂ ಎಲ್ಲೆಂದರಲ್ಲಿ ಕಸ ಎಸೆಯುವುದರ ಬಗ್ಗೆ ಬುಧವಾರವಷ್ಟೇ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದೀಗ ಮೇಯರ್‌ - ಫೋನ್‌ ಇನ್‌ ಕಾರ್ಯಕ್ರಮದಲ್ಲೂ ಕಸದ ವಿಷಯವಾಗಿಯೇ ಹೆಚ್ಚಿನ ದೂರುಗಳು ಬಂದಿದ್ದು ವಿಶೇಷ. ಇನ್ನಾದರೂ ಪಾಲಿಕೆಯ ಆಡಳಿತ ಸಮರ್ಪಕ ಕಸ ವಿಲೇವಾರಿಯತ್ತ ಗಮನ ಹರಿಸಬೇಕಿದೆ.