ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದರ ವಿರುದ್ಧ ರೈತ ಸಂಘ ಮತ್ತು ವಿವಿಧ ಸಂಘಟನೆಯ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸಭೆ ನಡೆಸಿದ ಕಾರ್ಯಕರ್ತರು ನಂತರ ಬೆಂಗಳೂರು- ಮೈಸೂರು ಹೆದ್ದಾರಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿಪಡಿಸಿ ಘೋಷಣೆ ಕೂಗಿದರು.
ಪ್ರಸ್ತುತದಲ್ಲಿ ಭತ್ತ ಮತ್ತು ಕಬ್ಬು ಕಟಾವು ಮಾಡಲಾಗಿದೆ, ಇನ್ನೂ ಕೆಲವು ಕಡೆ ಹಾಗೆಯೇ ಇದೆ. ಹೀಗಿದ್ದರೂ ಅಣೆಕಟ್ಟೆಯಿಂದ ನೀರು ನಿಲ್ಲಿಸಿರುವುದು ಸರಿಯಲ್ಲ. ಜಿಲ್ಲೆಯ ಕೊನೆ ಭಾಗಗಳಿಗೆ ನೀರು ತಲುಪಲು ದುಸ್ತರವಾಗಿರುವ ಸನ್ನಿವೇಶದಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿರುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ರೈತರಿಗೆ ನೀರನ್ನು ತಕ್ಷಣ ಹರಿಸುವ ನಿರ್ಧಾರವನ್ನು ನೀರಾವರಿ ಸಲಹಾ ಸಮಿತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ತಮಿಳುನಾಡಿಗೆ ನೀರು ಹರಿಸಿದ್ದರಿಂದ ಕಾವೇರಿ ಕೊಳ್ಳದ ರೈತರಿಗೆ ಎರಡು ಬೆಳೆ ಬೆಳೆಯಲು ಸಾಧ್ಯವಾಗದೇ ನಷ್ಟವಾಯಿತು. ಇದರ ನಷ್ಟವನ್ನು ಸರ್ಕಾರ ಭರಿಸಲಿಲ್ಲ ಎಂದು ಆರೋಪಿಸಿದರು.
ನಾಲೆಗಳ ಆಧುನೀಕರಣ ಬೇಡವೆಂದು ಹೇಳುತ್ತಿಲ್ಲ. ಆದರೆ ನಾಲೆಗಳಿಗೆ ನೀರನ್ನು ಕಟ್ಟು ಪದ್ಧತಿಯಲ್ಲಿ ಹರಿಸಬೇಕು. ನಿಲ್ಲಿಸಿದಾಗ ನಾಲಾ ದುರಸ್ತಿ ಕೆಲಸ ಮಾಡಿಕೊಳ್ಳಲಿ. ನೀರು ನಿಲ್ಲಿಸಿರುವುದರಿಂದ ಈಗ ಬೆಳೆದು ನಿಂತಿರುವ ಬೆಳೆಗಳ ಗತಿಯೇನು? ನಿರಂತರವಾಗಿ ನೀರು ನಿಲ್ಲಿಸುವುದಕ್ಕೆ ನಮ್ಮ ವಿರೋಧವಿದೆ, ಈ ಸರ್ಕಾರ ರೈತರಿಗೆ ತೊಂದರೆ ಕೊಡುವುದಕ್ಕೇ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಿದೆ, ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಾರಿಗೆ ದರ ಹೆಚ್ಚಾಗಿದೆ, ರೈತರಿಗೆ ವಿತರಿಸುವ ರಾಸಾಯನಿಕ ಗೊಬ್ಬರ ಬೆಲೆಯನ್ನೂ ಹೆಚ್ಚಳ ಮಾಡಲಾಗಿದೆ. ಇದೆಲ್ಲವನ್ನೂ ಸರಿದೂಗಿಸುವುದೇ ಕಷ್ಟವಾಗಿರುವಾಗ ಇದರ ಬಗ್ಗೆ ಆಲೋಚಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಜನರು ಮತ್ತು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ದೊಡ್ಡಪಾಳ್ಳ ಮಾತನಾಡಿ, ತಮಿಳುನಾಡಿಗೆ ನೀರನ್ನು ಬಿಟ್ಟಿರುವ ಕಾರಣದಿಂದಲೇ ಕಾವೇರಿ ಕೊಳ್ಳದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ನಾಲೆಗಳಿಗೆ ನೀರು ಹರಿಸದಿರುವ ಕ್ರಮ ಸರಿಯಲ್ಲ, ಕೂಡಲೇ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರಶೇಖರ್, ಪ್ರಭುಲಿಂಗು, ಗೋಪಾಲಪುರ ಸುರೇಶ್, ಸೋ.ಶಿ.ಪ್ರಕಾಶ್, ಬೋರಲಿಂಗೇಗೌಡ, ಪಟೇಲ್ ರಾಮಣ್ಣ, ಹೊಳಲು ಸಂತೋಷ್, ಅಣ್ಣೂರು ಸಿದ್ದೇಗೌಡ, ನಾಗಪ್ಪ ಭಾಗವಹಿಸಿದ್ದರು.