ಸಾರಾಂಶ
ಶಿರಸಿ: ಪ್ರೇಮಿಗಳ ದಿನಾಚರಣೆ ನಿಂತರೆ ದೇಶಕ್ಕೆ ಒಳಿತಾಗಲಿದೆ ಎಂದು ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಮಂಗಳವಾರ ನಗರದ ಮಾರಿಕಾಂಬಾ ಪ್ರೌಢಶಾಲಾ ಆವರಣದಲ್ಲಿ ಯುಗಾದಿ ಉತ್ಸವ ಸಮಿತಿಯ ೨೬ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರೇಮಿಗಳ ದಿನವನ್ನು ಆಚರಣೆ ಮಾಡದಿದ್ದರೆ ವಿವಾಹದ ಜಟಿಲತೆಯೂ ಕಡಿಮೆಯಾಗಲಿದೆ ಎಂದು ಶ್ರೀಗಳು ತಿಳಿಸಿದರು.ಯುಗಾದಿ ಎಂದರೆ ನೆನಪಾಗುವುದು ಬೇವು- ಬೆಲ್ಲ. ಇದರ ಅರ್ಥ ಜೀವನದಲ್ಲಿ ಸುಖ ದುಃಖ ಎರಡು ಇದೆ. ಜೀವನದಲ್ಲಿಯೂ ಕಷ್ಟಗಳು ಜಾಸ್ತಿ, ಸುಖಗಳು ಕಡಿಮೆ. ಬೆಲ್ಲ ಮೊದಲಿಲ್ಲ ಬೇವು ಮೊದಲ ಪದವಿದೆ. ಹಾಗೆಯೇ ಜೀವನದಲ್ಲಿಯೂ ಕಷ್ಟ ಮೊದಲು ಎದುರಾಗುತ್ತವೆ. ತದನಂತರದಲ್ಲಿ ಸುಖ ದೊರೆಯುವುದು. ಸಾತ್ವಿಕ ಹಬ್ಬಗಳ ಆಚರಣೆ ಯಾಗಬೇಕು. ಕೇವಲ ಸಂತೋಷದ ಉದ್ದೇಶ ಇರಬಾರದು. ಉನ್ಮಾದ ಹುಟ್ಟಿಸುವ ಸಡಗರ ಇರಬಾರದು ಎಂದರು.
ಬಣ್ಣದಮಠದ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಯಾವುದೇ ಜಾತಿ ಆಧಾರದ ಮೇಲೆ ರಚಿತವಾದದ್ದಲ್ಲ. ಭರತಖಂಡ ಸನಾತನ ಧರ್ಮದ ಭಾವ ರಾಗ ತಾಳದ ಭಾವನಾತ್ಮಕೆಯಿಂದ ಕೂಡಿದ ರಾಷ್ಟ್ರ ಭರತಭೂಮಿಯಾಗಿದೆ. ಬೇರೆ ಜಗತ್ತಿಗೆ ಸಂಸ್ಕೃತಿ ಪಾಠ ಮಾಡಿದ ನಮ್ಮ ದೇಶ, ಶಿಕ್ಷಣದಲ್ಲಿ ಮಾತ್ರ ಪಾಶ್ಚಾತ್ಯ ಸಂಸ್ಕೃತಿಯನ್ನು ಅಳವಡಿಸುವುದು ಬೇಸರದ ಸಂಗತಿ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಜೀ ದಿಕ್ಸೂಚಿ ಭಾಷಣ ಮಾಡಿ, ಪ್ರತಿಯೊಂದು ಹಬ್ಬಕ್ಕೆ ಪ್ರಾಕೃತಿಕ ಹಿನ್ನೆಲೆ ಇದ್ದು, ಹಿಂದೂಗಳ ಪ್ರತಿ ಮನೆಯಲ್ಲಿ ಸಿಹಿ ಮಾಡುತ್ತಾರೆ. ಚಾರಿತ್ರಿಕ ಹಿನ್ನೆಲೆ ಇದ್ದು, ಯುಗಾದಿ ಎಂದರೆ ಹಿಂದೂಗಳಿಗೆ ಯುಗಾದಿ ಸ್ವಾತಂತ್ರ್ಯ ದಿನಾಚರಣೆ ದಿನ. ಯುಗಾದಿಗೆ ಪ್ರಕೃತಿ ಹಿನ್ನೆಲೆ ಇದ್ದು, ಪಾಶ್ಚಾತ್ಯರ ಆಕ್ರಮಣದಿಂದ ಮೊದಲು ಜಗತ್ತಿನಲ್ಲಿ ಯುಗಾದಿಯನ್ನು ಹೊಸ ವರ್ಷ ಎಂದು ಆಚರಣೆ ಮಾಡುತ್ತಿದ್ದರು. ನಮ್ಮ ಹೊಸ ವರ್ಷವನ್ನು ಅತ್ಯಂತ ವೈಜ್ಞಾನಿಕವಾಗಿ ನಮ್ಮ ಪೂರ್ವಜರು ರೂಪಿಸಿದ್ದಾರೆ ಎಂದರು.
ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಗಜಾನನ ಸಕಲಾತಿ ಸ್ವಾಗತಿಸಿದರು. ಎಂ.ಎಂ. ಭಟ್ಟ ನಿರೂಪಿಸಿ, ವಂದಿಸಿದರು.