- ತೋಟಕ್ಕೆ ಶಾಸಕ ಬಸವಂತಪ್ಪ ಭೇಟಿ । ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಬೆಳೆ ನೆಲಕ್ಕುರುಳಿದ್ದು, ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಸಂತ್ರಸ್ತ ರೈತರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಗ್ರಾಮದ ಹಾಲೇಶ್ ಎಂಬವರ ತೋಟದಲ್ಲಿ ಬಾಳೆಗಿಡಗಳು ಹಾಗೂ ಅಡಕೆ ಮರಗಳು ನೆಲಕ್ಕುರುಳಿ, ಲಕ್ಷಾಂತರ ರು. ನಷ್ಟವಾಗಿದೆ. ಸುದ್ದಿ ತಿಳಿದು ಮಂಗಳವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಭೇಟಿ ನೀಡಿದರು.ಆನೆಕಲ್ಲು ಮಳೆ ಸುರಿದ ಸಂದರ್ಭದಲ್ಲಿ ಬಾಳೆ ಗಿಡಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದವು. ಆದರೆ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ತೋಟದಲ್ಲಿ ಹಾಕಿದ್ದ ಎಲ್ಲ ಬಾಳೆ ಗಿಡಗಳು ನೆಲಕ್ಕುರುಳಿವೆ. ಸದ್ಯಕ್ಕೆ ಬಾಳೆ ಗಿಡಗಳೇ ಆರ್ಥಿಕ ಮೂಲವಾಗಿದ್ದವು. ಈಗ ಎಲ್ಲ ಬಾಳೆ ಗಿಡಗಳು ನೆಲಕ್ಕೆ ಉರುಳಿರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ರೈತ ಹಾಲೇಶ್ ಅವರು ಶಾಸಕರು ಮತ್ತು ತೋಟಗಾರಿಕೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.
ಬೆಳೆಹಾನಿ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಿ ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಸ್ಥಳದಲ್ಲೇ ಇದ್ದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಫರ್ವಿನ್ ಅವರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.
ಈ ಸಂದರ್ಭ ತೋಟಗಾರಿಕೆ ಇಲಾಖೆ ಅಧಿಕಾರಿ ಅರುಣ್ ರಾಜ್, ಕಂದಾಯ ನಿರೀಕ್ಷಕ ಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ರೇಖಾ, ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಎಸ್.ಕೆ.ಚಂದ್ರಣ್ಣ, ರೈತರಾದ ಹಾಲೇಶ್, ನಾಗಣ್ಣ, ಷಣ್ಮುಖಪ್ಪ, ಗುರುಸಿದ್ದಪ್ಪ, ಡಿ.ಎಚ್.ಕರಿಯಪ್ಪ, ಅಂಜಿನಪ್ಪ, ರಾಜಣ್ಣ, ದುರುಗಪ್ಪ, ಹನುಮಂತಪ್ಪ, ಕುಬೇರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.
- - - -12ಕೆಡಿವಿಜಿ31:ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ನೆಲಕ್ಕೆ ಉರುಳಿದ ಬಾಳೆ- ಅಡಕೆ ಬೆಳೆಗಳನ್ನು ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲಿಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.